ಕಾಂಚನದಲ್ಲಿ ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ

Update: 2019-10-22 14:13 GMT

ಉಪ್ಪಿನಂಗಡಿ: ನಮ್ಮ ದೇಶವು ಸುಮಾರು ಒಂದು ಸಾವಿರ ವರ್ಷಗಳಷ್ಟು ಕಾಲ ಅನ್ಯರ ಗುಲಾಮಗಿರಿಯಲ್ಲಿದ್ದರೂ, ಭಾರತದ ಮಣ್ಣಿನ ಗುಣದಿಂದಾಗಿ ಇದು ಕತ್ತಲೆಯ ಯುಗವಾಗಿರಲಿಲ್ಲ. ಬದಲಾಗಿ ಇದು ಹೋರಾಟಗಾರರ ಯುಗವಾಗಿತ್ತು ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದ್ದಾರೆ.

ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯಂಗವಾಗಿ ಬಿಜೆಪಿ ಆರಂಭಿಸಿರುವ ಗಾಂಧಿ ಸಂಕಲ್ಪ ಯಾತ್ರೆಗೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಚನದಲ್ಲಿ ಅ.22ರಂದು ಚಾಲನೆ ನೀಡಲಾಗಿದ್ದು, ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ಸಂಜೀವ ಮಠಂದೂರು ಮಾತನಾಡಿ, ಮಹಾತ್ಮ ಗಾಂಧೀಜಿಯವರು ರಾಷ್ಟ್ರಪಿತ ಅವರ ಬದುಕನ್ನು  ಕೇವಲ ಗುಣಗಾನಕ್ಕೆ ಮಾತ್ರ ಸೀಮಿತಗೊಳಿಸಬಾರದು. ಅವರ ಪರಿಕಲ್ಪನೆ ಮನೆ-ಮನೆಯನ್ನು ಮುಟ್ಟಬೇಕು. ಪ್ರತಿಯೋರ್ವರು ಅವರ ತತ್ವಾದರ್ಶಗಳನ್ನು ಪಾಲಿಸುವಂತಾಗಬೇಕು. ಈ ದೇಶದ ಮಹನೀಯರ ಹೆಸರನ್ನು ಕೇವಲ ರಾಜಕೀಯಕ್ಕಾಗಿ ಬಿಜೆಪಿ ಎಂದಿಗೂ ಬಳಸಿಕೊಂಡಿಲ್ಲ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‍ಗೆ ಭಾರತ ರತ್ನ ನೀಡಿದ್ದು ವಾಜಪೇಯಿಯವರು ಪ್ರಧಾನಿಯಾಗಿದ್ದಾಗ. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪ್ರತಿಮೆ ಸ್ಥಾಪಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ. ಅಂದು ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಟ್ಟಿದ್ದ ಅಂಡಮಾನ್‍ನಲ್ಲಿರುವ ಜೈಲಿಗೆ ಭೇಟಿ ಕೊಟ್ಟರೆ ಅಲ್ಲಿ ಸಾವರ್ಕರ್ ಅವರನ್ನು ಕೂಡಿ ಹಾಕಿದ್ದ ಕೊಠಡಿಯೊಳಗೆ ಇಂದೂ ಅವರ ಭಾವಚಿತ್ರ ಇಟ್ಟು, ಅದಕ್ಕೆ ದೀಪ ಉರಿಸಲಾಗುತ್ತಿದೆ. ಆದರೆ ಕೆಲವು ಮಹನೀಯರನ್ನು ಕೇವಲ ರಾಜಕೀಯಕ್ಕೆ ಮಾತ್ರ ಬಳಸಿಕೊಳ್ಳುತ್ತಾರೆ. ಅವರಿಗೆ ಗೌರವವನ್ನು ನೀಡುತ್ತಿಲ್ಲ. ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಕೊಡದವರನ್ನು ರಾಷ್ಟ್ರ ದ್ರೋಹಿಗಳು ಎನ್ನುವುದಕ್ಕಿಂತಲೂ ಅವರನ್ನು ಇಲ್ಲಿಂದ ಗಡಿಪಾರು ಮಾಡುವುದೇ ಉತ್ತಮ. ಅವರಿಗೆ ಈ ದೇಶದಲ್ಲಿ ಬದುಕುವ ಯೋಗ್ಯತೆ ಇಲ್ಲ ಎಂದರು.

ಬಿಜೆಪಿಯ ಹಿರಿಯ ಕಾರ್ಯಕರ್ತ ಭಾಸ್ಕರ್ ನಾಯಕ್ ಪೊರೋಳಿ ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರು. ಯಾತ್ರೆಗೆ ಚಾಲನೆ ನೀಡಿದ ನೆನಪಿನಲ್ಲಿ ಆ ಪರಿಸರದಲ್ಲಿ ಎರಡು ತೆಂಗಿನ ಸಸಿಗಳನ್ನು ನೆಡಲಾಯಿತು. ಈ ಯಾತ್ರೆಯು ಈ ದಿನ 34 ನೆಕ್ಕಿಲಾಡಿಯ ಸುಭಾಶ್‍ನಗರದಲ್ಲಿ ಸಮಾಪ್ತಿಗೊಂಡಿತು. ಯಾತ್ರೆಯು ಪುತ್ತೂರು ವಿಧಾನಸಭಾ ಕ್ಷೇತ್ರದಾದ್ಯಂತ  13 ದಿನಗಳ ಕಾಲ ಸಂಚರಿಸಲಿದೆ. 

ವೇದಿಕೆಯಲ್ಲಿ ಬಿಜೆಪಿಯ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಂಡಲ ಪ್ರಧಾನ ಕಾರ್ಯದರ್ಶಿ ಶಂಭು ಭಟ್, ರಾಮ್‍ದಾಸ್, ಶ್ರೀಮತಿ ಗೌರಿ,  ಜಿ.ಪಂ. ಸದಸ್ಯೆ ಶಯನಾ ಜಯಾನಂದ್, ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಪಂರ್ದಾಜೆ, ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಯಶವಂತ ಗುಂಡ್ಯ,  ಕಾಂಚನ ಬೂತ್ ಅಧ್ಯಕ್ಷ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಿಜೆಪಿ ಉಪ್ಪಿನಂಗಡಿ ಗ್ರಾಮ ಸಮಿತಿ ಅಧ್ಯಕ್ಷ ಸುರೇಶ್ ಅತ್ರಮಜಲು, ತಾ.ಪಂ. ಸದಸ್ಯರಾದ ತೇಜಸ್ವಿನಿ, ಲಕ್ಷ್ಮಣ್ ಗೌಡ ಬೆಳ್ಳಿಪ್ಪಾಡಿ, ಸುಜಾತಕೃಷ್ಣ,  ರಾಮಕುಂಜ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್, ಗ್ರಾ.ಪಂ. ಸದಸ್ಯರಾದ ರಮೇಶ್ ಭಂಡಾರಿ, ಗಣೇಶ್ ಕಿಂಡೋವು, ಮಾಧವ ಗೌಡ ಒರುಂಬೋಡಿ, ಆನಂದ, ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಸಾಜ ರಾಧಾಕೃಷ್ಣ ಆಳ್ವ, ಬೂಡಿಯಾರ್ ರಾಧಾಕೃಷ್ಣ ರೈ, ಆರ್.ಸಿ. ನಾರಾಯಣ, ವಿಶ್ವೇಶ್ವರ ಭಟ್ ಬಂಗಾರಡ್ಕ, ಶ್ರೀಮತಿ ವಿಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಕೇಶವ ಗೌಡ ಬಜತ್ತೂರು ಸ್ವಾಗತಿಸಿದರು. ತಾ.ಪಂ. ಸದಸ್ಯ ಮುಕುಂದ ಬಜತ್ತೂರು ವಂದಿಸಿದರು. ಪುತ್ತೂರು ಯುವಮೋರ್ಚಾ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News