ಹಿರಿಯ ನಾಗರಿಕರಿಗಾಗಿ ಹೊರಾಂಗಣ ಜಿಮ್ ಸ್ಥಾಪನೆ: ರಘುಪತಿ ಭಟ್

Update: 2019-10-22 15:14 GMT

ಉಡುಪಿ, ಅ.22: ಹಿರಿಯ ನಾಗರಿಕರು ಸಂಜೆ ವೇಳೆ ವಾಕಿಂಗ್ ನಡೆಸಿ ವ್ಯಾಯಾಮ ಮಾಡಲು ಅನುಕೂಲವಾಗುವಂತೆ ಅಜ್ಜರಕಾಡಿನ ಭುಜಂಗ ಪಾರ್ಕ್‌ನಲ್ಲಿ 70 ಲಕ್ಷ ರೂ. ವೆಚ್ಚದಲ್ಲಿ ಬೆಂಗಳೂರು ಮಾದರಿಯಲ್ಲಿ ಹೊರಾಂಗಣ ಜಿಮ್ ಸ್ಥಾಪಿಸಲಾಗುವುದು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.

ಉಡುಪಿ ಹಿರಿಯ ನಾಗರಿಕರ ಸಂಸ್ಥೆಯ ಆಶ್ರಯದಲ್ಲಿ ಬ್ಯಾಂಕ್ ಆಫ್ ಬರೋಡ ಉಡುಪಿ ಪ್ರಾದೇಶಿಕ ಕಚೇರಿಯ ಸಹಭಾಗಿತ್ವದಲ್ಲಿ ಅಜ್ಜರಕಾಡಿನ ಪುರಭವನದಲ್ಲಿ ಮಂಗಳವಾರ ಆಯೋಜಿಸಲಾದ 80ವರ್ಷ ಪೂರೈಸಿದ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಪ್ರವಾಸೋದ್ಯಮ ಇಲಾಖೆಯ 1.50 ಕೋಟಿ ರೂ. ಹಾಗೂ ನಗರಸಭೆಯ 50 ಲಕ್ಷ ರೂ. ಅನುದಾನ ಸೇರಿದಂತೆ ಒಟ್ಟು 2 ಕೋಟಿ ರೂ. ವೆಚ್ಚದಲ್ಲಿ ಅಜ್ಜರಕಾಡಿನ ಭುಜಂಗ ಪಾರ್ಕ್ ಅಭಿವೃದ್ಧಿ ಪಡಿಸಲು ಕ್ರಿಯಾ ಯೋಜನೆ ರೂಪಿಸಿಲಾಗಿದೆ ಎಂದರು.

ಈ ಅನುದಾನದಲ್ಲಿ 60ರಿಂದ 70 ಲಕ್ಷ ವೆಚ್ಚದಲ್ಲಿ ಹಿರಿಯ ನಾಗರಿಕರಿಗೆ ಹೊರಾಂಗಣ ಜಿಮ್ ಸ್ಥಾಪನೆ ಹಾಗೂ 55 ಲಕ್ಷ ರೂ. ವೆಚ್ಚದಲ್ಲಿ ಅಂಗವಿಕಲರ ಹೊರಂಗಣ ಜಿಮ್ ಬೇಕಾಗುವ ಉಪಕರಣಗಳನ್ನು ಅಳವಡಿಸಲಾಗುವುದು. ಅದೇ ರೀತಿ ಇಲ್ಲಿ ಚಿಟ್ಟೆ ಪಾರ್ಕ್ ನಿರ್ಮಿಸುವ ಬಗ್ಗೆಯೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಹಿರಿಯ ನಾಗರಿಕರ ಸಂಸ್ಥೆಗೆ ಪ್ರತ್ಯೇಕ ಸ್ಥಳಾವಕಾಶದ ಅವಶ್ಯಕತೆ ಇಲ್ಲ. ಈಗ ಅಜ್ಜರಕಾಡಿನಲ್ಲಿರುವ ಕಚೇರಿಯನ್ನೇ ಉಪಯೋಗವಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕಾಗಿದೆ. ಅದಕ್ಕಾಗಿ ಶಾಸಕ ನಿಧಿಯಿಂದ 3 ಲಕ್ಷ ರೂ. ಮೀಸ ಲಿರಿಸಲಾಗಿದೆ. ಅಲ್ಲದೆ ಯುದ್ಧ ಸ್ಮಾರಕದಿಂದ ಕಚೇರಿವರೆಗೆ ಇಂಟರ್‌ಲಾಕ್ ಅಳವಡಿಸುವ ಯೋಜನೆ ಕೂಡ ಹಾಕಿಕೊಳ್ಳಲಾಗಿದೆ ಎಂದವರು ತಿಳಿಸಿದರು.

ಅಧ್ಯಕ್ಷತೆಯನ್ನು ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್ ವಹಿಸಿದ್ದರು. ಈ ಸಂದರ್ಭದಲ್ಲಿ 80ವರ್ಷ ಪೂರೈಸಿದ ಸಂಸ್ಥೆಯ ಎ.ಪಿ. ಕೊಡಂಚ, ಡಾ.ಎನ್.ಎಸ್.ಶೆಟ್ಟಿ, ಅಲ್ಬನ್ ರೊಡ್ರಿಗಸ್ ಸೇರಿದಂತೆ ಒಟ್ಟು 17 ಮಂದಿಯನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಬ್ಯಾಂಕ್ ಆಫ್ ಬರೋಡಾ ಉಡುಪಿ ಪ್ರಾದೇಶಿಕ ಕಚೇರಿಯ ಮಹಾಪ್ರಬಂಧಕ ರವೀಂದ್ರ ರೈ ಮಾತನಾಡಿದರು. ಹಿರಿಯ ನಾಗರಿಕರ ಸಂಸ್ಥೆಯ ಅಧ್ಯಕ್ಷ ಸಿ.ಎಸ್.ರಾವ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಎಚ್.ವಿಶ್ವನಾಥ ಹೆಗ್ಡೆ ವಂದಿಸಿದರು. ಜಂಟಿ ಕಾರ್ಯದರ್ಶಿ ಸದಾನಂದ ಆರ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News