ಎಂಆರ್‌ಪಿಎಲ್ ಉದ್ಯೋಗದಲ್ಲಿ ಸ್ಥಳೀಯರ ಕಡೆಗಣನೆ: ಆರೋಪ

Update: 2019-10-23 05:17 GMT

ಮಂಗಳೂರು, ಅ.22: ಸಾರ್ವಜನಿಕ ರಂಗದ ಬೃಹತ್ ಉದ್ದಿಮೆಗಳಿಂದ ನಿರುದ್ಯೋಗ ಸಮಸ್ಯೆ ನಿವಾರಣೆ, ಪರಿಸರದ ಅಭಿವೃದ್ಧಿಯ ಮಹದಾಸೆಯೊಂದಿಗೆ ಎಂಆರ್‌ಪಿಎಲ್‌ನಂತಹ ಬೃಹತ್ ಕಂಪೆನಿಗಳಿಗೆ ಇಲ್ಲಿನ ನೆಲ, ಜಲವನ್ನು ಉಪಯೋಗಿಸಲು ಅನುಮತಿ ನೀಡಿದ್ದ ಸ್ಥಳೀಯರು ಇಂದು ಉದ್ಯೋಗಕ್ಕಾಗಿ ಹೋರಾಟ ನಡೆಸುವ ಪರಿಸ್ಥಿತಿ ಎದುರಾಗಿದೆ. ಸುಮಾರು ಮೂರು ದಶಕಗಳಿಂದ ಸ್ಥಳೀಯರಿಗೆ ಉದ್ಯೋಗ ಎಂಬ ಕಂಪನಿಯ ಹೇಳಿಕೆಗಳು ಕನಸಾಗಿ ಉಳಿದಿರುವಂತೆಯೇ, ಇದೀಗ ಮತ್ತೆ ವಿವಿಧ ಸ್ಥಾನಗಳಿಗೆ ಕಂಪೆನಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಆದರೆ ವೆಬ್‌ಸೈಟ್ ಮೂಲಕವೇ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಸ್ಥಳೀಯರಿಗೆ ಈ ಬಾರಿಯೂ ಅನ್ಯಾಯವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಎಂಆರ್‌ಪಿಎಲ್ ಅ.11ರಿಂದ ವಿವಿಧ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿದ್ದು, ನ.9ರ ತನಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 38,500 ರೂ. ವೇತನದ ಸಿ ಮತ್ತು ಡಿ ಗ್ರೇಡ್‌ನ 233 ಉದ್ಯೋಗ ಭರ್ತಿ ನಡೆಯಲಿದೆ. ಹಿಂದೆ ಮ್ಯಾನೇಜ್‌ಮೆಂಟ್ ಕೋಟಾದ ಉದ್ಯೋಗವನ್ನು ಅಖಿಲ ಭಾರತ ಮಟ್ಟದಲ್ಲಿ ಆಹ್ವಾನಿಸಿ ಭರ್ತಿ ಮಾಡುತ್ತಿದ್ದರೆ, ನಾನ್ ಮ್ಯಾನೇಜ್‌ಮೆಂಟ್ ಉದ್ಯೋಗವನ್ನು ಸ್ಥಳೀಯ ಮಟ್ಟದಲ್ಲಿ ಆಹ್ವಾನಿಸಿ ನೀಡಲಾಗುತ್ತಿತ್ತು. ಈಗ ಅದನ್ನು ಕೈಬಿಟ್ಟು ಎಲ್ಲದಕ್ಕೂ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಇದರಿಂದ ಸ್ಥಳೀಯರು ಉದ್ಯೋಗಾವಕಾಶದಿಂದ ಸಂಪೂರ್ಣ ವಂಚಿತರಾಗುತ್ತಿದ್ದು, ಉದ್ಯೋಗ ಹೊರ ರಾಜ್ಯದವರ ಪಾಲಾಗುತ್ತಿದೆ.

ಸೆಕ್ಯುರಿಟಿ ಇನ್‌ಸ್ಪೆಕ್ಟರ್, ಜೂನಿಯರ್ ಆಫೀಸರ್, ಜೂನಿಯರ್ ಕೆಮಿಸ್ಟ್ ಟ್ರೈನಿ, ಟೆಕ್ನಿಕಲ್ ಅಸಿಸ್ಟೆಂಟ್ ಟ್ರೈನಿ, ಡ್ರ್‌ಟಾಮ್ಯಾನ್ ಟ್ರೈನಿ, ಟ್ರೈನಿ ಅಸಿಸ್ಟೆಂಟ್ ಹುದ್ದೆಗಳಿವೆ. ವಿವಿಧ ಮೀಸಲು ನೀತಿಯಡಿ ಬಿಎಸ್ಸಿ, ಎಂಎಸ್ಸಿ ಪದವೀಧರರೂ ಸೇರದಂತೆ ಇಂಜಿನಿಯರ್‌ಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಮೂರು ದಶಕಗಳ ಹಿಂದೆ ಎಂಆರ್‌ಪಿಎಲ್ ಸ್ಥಾಪನೆ ಪ್ರಕ್ರಿಯೆ ಆರಂಭಗೊಂಡಾಗ ಕರಾವಳಿಯ ಯುವಜನರಿಗೆ ಸಹಸ್ರಾರು ಸಂಖ್ಯೆಯಲ್ಲಿ ತಾಯ್ನೆಲದಲ್ಲೇ ಉದ್ಯೋಗ ದೊರಕುವ, ಮುಂಬೈ, ಕೊಲ್ಲಿ ದೇಶಗಳಿಗೆ ವಲಸೆ ತಪ್ಪಿಸುವ ಬಣ್ಣ ಬಣ್ಣದ ಕನಸುಗಳನ್ನು ಜನತೆಯ ಮುಂದಿಡಲಾಗಿತ್ತು. ನಿರುದ್ಯೋಗ ನಿವಾರಣೆ, ಆರ್ಥಿಕ ಅಭಿವೃದ್ದಿಯ ಕನಸನ್ನು ಬಿತ್ತಿ ಜನರನ್ನು ಸುಮ್ಮನಾಗಿಸಿ ಆ ಮೂಲಕ ಅಂದು ಫಲವತ್ತಾದ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಲಾಗಿತ್ತು. ಪರಿಸರ ಮಾಲಿನ್ಯ, ಅಮೂಲ್ಯವಾದ ಭೂಮಿ, ಜಲಮೂಲಗಳ ನಷ್ಟದ ಹೊರತಾಗಿಯೂ ನಿರುದ್ಯೋಗದಿಂದ ಬಳಲುತ್ತಿರುವ ಜಿಲ್ಲೆಯ ಯುವಜನರ ಭವಿಷ್ಯ, ಉದ್ಯೋಗ ಸೃಷ್ಟಿ, ಆರ್ಥಿಕ ಅಭಿವೃದ್ಧಿಯ ಉದ್ದೇಶ ಸಾಧಿಸುವ ಭರವಸೆಯ ಕಾರಣಕ್ಕೆ ಕರಾವಳಿಯ ಜನತೆ ತೈಲಾಗಾರ ಸ್ಥಾಪನೆಯನ್ನು ಬೆಂಬಲಿಸಿದ್ದರು. ಆದರೆ ಲಕ್ಷಗಟ್ಟಲೆ ಉದ್ಯೋಗ ದೊರಕುವ ಭರವಸೆ ನೀಡಲಾಗಿತ್ತಾದರೂ, ನಿರೀಕ್ಷಿತ ಉದ್ಯೋಗ ಸಿಕ್ಕಿಲ್ಲ ಎನ್ನುವುದು ಡಿವೈಎ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರ ಆಕ್ಷೇಪ.

ಮಾತ್ರವಲ್ಲದೆ, ಭೂಸ್ವಾಧೀನ, ಕಂಪೆನಿ ಸ್ಥಾಪನೆಯ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ನಾಯಕರು ಅಪಾರ ಸಂಖ್ಯೆಯ ಉದ್ಯೋಗ ಸೃಷ್ಟಿ, ನಿರುದ್ಯೋಗ ನಿವಾರಣೆಯ ಸ್ಪಷ್ಟ ಭರವಸೆಗಳನ್ನು ನೀಡಿದ್ದರು. ಆದರೆ ಕಂಪೆನಿ ಸ್ಥಾಪನೆಯ ನಂತರ ಎಲ್ಲರೂ ಭರವಸೆಯನ್ನು ಮರೆತು ಬಿಟ್ಟಿದ್ದಾರೆ. ಬದಲಿಗೆ ಕಂಪೆನಿಯ ಪೆಟ್ರೋಕೆಮಿಕಲ್ ಉತ್ಪಾದನೆಗಳು, ತಪ್ಪಾದ ನಿರ್ವಹಣೆಗಳಿಂದಾಗಿ ಜಿಲ್ಲೆಯಲ್ಲಿ ವ್ಯಾಪಕವಾದ ಪರಿಸರ ಮಾಲಿನ್ಯಗಳು ಉಂಟಾಗಿವೆ, ಸುತ್ತಲ ಗ್ರಾಮದ ಜನತೆ ಹಲವು ರೀತಿಯ ಮಾಲಿನ್ಯ ಸಂಬಂಧಿ ರೋಗಗಳಿಗೆ ಗುರಿಯಾಗಿದ್ದಾರೆ. ನೇತ್ರಾವತಿ ನದಿಯ ನೀರನ್ನು ದೊಡ್ಡ ಪ್ರಮಾಣದಲ್ಲಿ ಕಂಪೆನಿ ಬಳಸುತ್ತಿರುವುದರಿಂದ ಜಿಲ್ಲೆಯ ಜನತೆಗೆ ಕೃಷಿ, ಕುಡಿಯುವ ನೀರಿಗೂ ತಾತ್ವಾರ ಉಂಟಾಗಿದೆ. ಕಂಪೆನಿಯ ಸಂಸ್ಕರಿತ ಮಲೀನ ನೀರನ್ನು ಸಮುದ್ರಕ್ಕೆ ಬಿಡುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಮತ್ಸ್ಯಕ್ಷಾಮವೂ ಎದುರಾಗಿದ್ದು, ಮೀನುಗಾರಿಕೆ ಉದ್ಯಮವೂ ಸಮಸ್ಯೆಗೀಡಾಗಿದೆ ಎನ್ನುತ್ತಾರೆ ಮುನೀರ್ ಕಾಟಿಪಳ್ಳ.

ಎಂಆರ್‌ಪಿಎಲ್ 233 ಹುದ್ದೆಗಳ ನೇಮಕಾತಿ ನಡೆಸುವುದಾಗಿ ರಾಷ್ಟ್ರಮಟ್ಟದಲ್ಲಿ ಸಾರ್ವಜನಿಕವಾಗಿ ಪ್ರಕಟನೆ ಹೊರಡಿಸಿದೆ. ಅದಕ್ಕಾಗಿ ಅ.11ರಿಂದ ನ.10ರವರಗೆ ಅರ್ಜಿಗಳನ್ನು ಆಹ್ವಾನಿಸಿದೆ. ಪ್ರಸಕ್ತ ಸಾಲಿನ ಅರ್ಜಿ ಆಹ್ವಾನದಲ್ಲಿ ಸ್ಥಳೀಯ ದಕ್ಷಿಣ ಕನ್ನಡ ಜಿಲ್ಲೆಯ ಯುವಜನರಿಗೆ ಯಾವುದೇ ಆದ್ಯತೆ, ಮೀಸಲಾತಿಗಳನ್ನು ನೀಡಲಾಗಿಲ್ಲ. ಇದು ನಿರುದ್ಯೋಗದಿಂದ ಕಂಗೆಟ್ಟಿರುವ ಜಿಲ್ಲೆಯ ಯುವಜನರ ಪಾಲಿಗೆ ಆಘಾತಕಾರಿಯಾಗಿದ್ದು, ಎಂಆರ್‌ಪಿಎಲ್ ತಕ್ಷಣವೇ ಈಗಿನ ಪ್ರಕಟನೆಯನ್ನು ಹಿಂಪಡೆದು ಸ್ಥಳೀಯ ಅರ್ಹ ಉದ್ಯೋಗಾಕಾಂಕ್ಷಿಗಳಿಗೆ ಶೇ.80 ಸ್ಥಾನಗಳನ್ನು ಮೀಸಲಿಟ್ಟು ಹೊಸದಾಗಿ ಪ್ರಕಟನೆ ಹೊರಡಿಸಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.


ಭರವಸೆ ನೀಡಿದಂತೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳು ಸೃಷ್ಟಿಯಾಗಲಿಲ್ಲ, ಹಾಗೆಯೆ ನೇಮಕಾತಿಯಲ್ಲೂ ಸ್ಥಳೀಯರಲ್ಲಿ ಕಂಪೆನಿಗೆ ಬೇಕಾದ ನುರಿತ ಅಭ್ಯರ್ಥಿಗಳಿಲ್ಲ ಎಂಬ ನೆಪ ಮುಂದಿಟ್ಟು ಬಹುತೇಕ ಹೊರರಾಜ್ಯದವರಿಗೆ ಉದ್ಯೋಗಗಳನ್ನು ನೀಡಲಾಯಿತು. ಭೂಮಿ ಕಳೆದುಕೊಂಡ ಕುಟುಂಬಕ್ಕೆ ಒಂದು ಉದ್ಯೋಗ ಕಡ್ಡಾಯವಾಗಿ ನೀಡಬೇಕು ಎಂಬ ಭೂಸ್ವಾಧೀನ ಕಾಯ್ದೆಯ ನಿಯಮದ ಕಾರಣಕ್ಕೆ ಕೆಲವೇ ಕೆಲವು ಉದ್ಯೋಗಗಳು ಸ್ಥಳೀಯರಿಗೆ ದೊರಕಿದವು. ಆ ನಂತರವೂ ಕಂಪೆನಿ ನೇಮಕಾತಿಯ ಪ್ರತೀ ಸಂದರ್ಭದಲ್ಲೂ ಕಂಪೆನಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಿರುದ್ಯೋಗಿ ಯುವಜನರನ್ನು ಕಡೆಗಣಿಸುತ್ತಲೇ ಬಂದಿದೆ. ನೇಮಕಾತಿಯ ಕೆಲವು ಸಂದರ್ಭದಲ್ಲಂತೂ ನೂರಕ್ಕೆ ನೂರರಷ್ಟು ಹೊರ ರಾಜ್ಯದವರೇ ಆಯ್ಕೆಯಾಗಿದ್ದಾರೆ.
-ಮುನೀರ್ ಕಾಟಿಪಳ್ಳ,
ಡಿವೈಎಫ್‌ಐ ರಾಜ್ಯಾಧ್ಯಕ್ಷ


ಎಂಆರ್‌ಪಿಎಲ್‌ನಲ್ಲಿ ಶೇ.70ರಷ್ಟು ಸ್ಥಳೀಯ ಉದ್ಯೋಗಿಗಳಿದ್ದಾರೆ

ಎಂಆರ್‌ಪಿಎಲ್‌ನ ಆಡಳಿತ ಹಾಗೂ ಆಡಳಿತೇತರ ಉದ್ಯೋಗಿಗಳಲ್ಲಿ ಶೇ.70ರಷ್ಟು ಸ್ಥಳೀಯರಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರ ಪೈಕಿ ಶೇ.95ರಷ್ಟು ಉದ್ಯೋಗಿಗಳು ಸ್ಥಳೀಯರೇ ಆಗಿದ್ದಾರೆ. ಈಗಿನ ನೇಮಕಾತಿ ನಡೆಸುವ ಸಂದರ್ಭದಲ್ಲಿ ರಾಜ್ಯದ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ. ನಮ್ಮದು ಕೇಂದ್ರ ಸರಕಾರದ ಸ್ವಾಮ್ಯದ ಕಂಪೆನಿಯಾಗಿರುವ ಕಾರಣ ದೇಶದ ಕಾನೂನು ಚೌಕಟ್ಟಿನೊಳಗೆ ನೇಮಕಾತಿ ನಡೆಯುತ್ತದೆ. ಕೇಂದ್ರ ಹಾಗೂ ರಾಜ್ಯ ಸರಕಾರ ನೀಡುವ ಸೂಚನೆಯ ಪ್ರಕಾರ ನೇಮಕಾತಿ ನಡೆಯುತ್ತದೆ. ಜಾಹೀರಾತಿನ ಪ್ರಕಾರ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದವರಲ್ಲಿ ಅರ್ಹ ಸ್ಥಳೀಯರಿದ್ದರೆ ನೇಮಕಾತಿಯಲ್ಲಿ ಆಯ್ಕೆಯಾಗುವ ಎಲ್ಲ ಅವಕಾಶಗಳಿರುತ್ತವೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಿಗೂ ಸರಕಾರದ ನಿಯಮಾನುಸಾರ ಕನಿಷ್ಠ ವೇತನ ಹಾಗೂ ಇತರ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು ದೊರೆಯುವುದರಿಂದ ಸಾಕಷ್ಟು ಸ್ಥಳೀಯರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಎಂಆರ್‌ಪಿಎಲ್‌ನ ಅಧಿಕಾರಿ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News