ಕಲ್ಲಾಪು ಪಟ್ಲ ರಸ್ತೆಯ ತಡೆಗೋಡೆ ಕುಸಿತ

Update: 2019-10-23 07:14 GMT

ಉಳ್ಳಾಲ, ಅ.23: ಕಳೆದ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಕಲ್ಲಾಪು ಪಟ್ಲ ಮುಖ್ಯ ರಸ್ತೆಯು ತಡೆಗೋಡೆ ಸಹಿತ ಕುಸಿದ ಘಟನೆ ಪಟ್ಲ ತಖ್ವಾ ಮಸೀದಿ ಬಳಿ ನಡೆದಿದೆ. ಇದರಿಂದ ವಾಹನ ಸಂಚಾರಕ್ಕೆ ದುಸ್ತರವಾಗಿದೆ. 

ಕಲ್ಲಾಪುವಿನಿಂದ ಪಟ್ಲಕ್ಕೆ ಹೋಗುವ ಈ ರಸ್ತೆಯ ಒಂದು ಭಾಗದಲ್ಲಿ ತೋಡು ಇದ್ದು, ಇದಕ್ಕೆ ಸಮಾನವಾಗಿ ಸಣ್ಣ ತಡೆಗೋಡೆ ನಿರ್ಮಿಸಲಾಗಿತ್ತು. ಪಟ್ಲ ಮಸೀದಿಯ ನೇರ ತೋಡಿಗೆ ಕಟ್ಟಲಾದ ಈ ತಡೆಗೋಡೆ ಕುಸಿದಿದೆ.

ಈ ರಸ್ತೆಯಲ್ಲಿ ಮರಳು ಸಾಗಾಟ ಲಾರಿ ನಿರಂತರ ಸಂಚರಿಸುತ್ತಿರುವುದರಿಂದ ರಸ್ತೆಯ ಒಂದು ಭಾಗದ ಡಾಮರು ಕಿತ್ತು ಹೋಗಿದ್ದು, ಅಲ್ಲಿ ಹೊಂಡ ಸೃಷ್ಟಿಯಾಗಿದೆ. ಈ ಹೊಂಡವನ್ನು ತಪ್ಪಿಸಲು ವಾಹನಗಳು ತಡೆಗೋಡೆ ಕಾಮಗಾರಿಗೆ ಹೊಂದಿಕೊಂಡು ಸಂಚರಿಸುತ್ತಿತ್ತು. ಇದರಿಂದ ತಡೆಗೋಡೆ ಎರಡು ತಿಂಗಳ ಹಿಂದೆಯೇ ಬಿರುಕುಬಿಟ್ಟಿತ್ತು. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಉಳ್ಳಾಲ ನಗರ ಸಭೆ ಮುಖ್ಯಾಧಿಕಾರಿ, ಜ್ಯೂನಿಯರ್ ಇಂಜಿನಿಯರ್ ಅವರಿಗೆ ಮನವಿ ಮೂಲಕ ಗಮನ ಸೆಳೆದಿದ್ದರು. ಆದರೂ ನಗರಸಭೆ ಈ ಬಗ್ಗೆ ಕ್ರಮ ಕೈಗೊಳ್ಳದ ಕಾರಣ ಈಗ ಒಂದು ಕಡೆ ಕುಸಿದಿದ್ದು, ಈ ರಸ್ತೆಯಾಗಿ ಸಂಚರಿಸದಂತೆ ಅಡ್ಡ ಕಲ್ಲುಗಳನ್ನು ಇಡಲಾಗಿದೆ. ಒಟ್ಟಾರೆ ಈ ರಸ್ತೆ ಈಗ ಅಪಾಯದಲ್ಲಿದ್ದರೂ ಮರಳು ಲಾರಿ ಸಂಚಾರ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News