ಸಂಗಬೆಟ್ಟು: ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಕುಸಿತ; ಮಕ್ಕಳು ಅಪಾಯದಿಂದ ಪಾರು

Update: 2019-10-23 08:36 GMT

ಬಂಟ್ವಾಳ, ಅ. 23: ಅಂಗನವಾಡಿ ಕೇಂದ್ರವೊಂದರ ಮೇಲ್ಛಾವಣಿ ಕುಸಿದು ಬಿದ್ದ ಘಟನೆ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಎಂಬಲ್ಲಿ ನಡೆದಿದ್ದು, ಈ ಸಂದರ್ಭ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ಪೆ  ಗ್ರಾಮದ ಅಂಚೆ ಕಚೇರಿಯಲ್ಲಿ ಸಮೀಪ ಕಾರ್ಯಾಚರಿಸುತ್ತಿರುವ  ಅಂಗನವಾಡಿ ಕೇಂದ್ರ ಇಂದು ಬೆಳಗ್ಗೆ ಸುಮಾರು 10.30 ರ ವೇಳೆ ಒಂದು ಭಾಗ ಕುಸಿದು ಬಿದ್ದಿದೆ.

ಈ ಅಂಗನವಾಡಿ ಕೇಂದ್ರವು ಸುಮಾರು 28 ವರ್ಷಗಳ ಹಳೆಯದಾಗಿದ್ದು, ಇದರ ಮೇಲ್ಭಾವಣಿ ಸಂಪೂರ್ಣವಾಗಿ ಶಿಥಿಲಗೊಂಡು, ಇಂದು ಸಾಮರ್ಥ್ಯ ಕಳೆದುಕೊಂಡು ಮುರಿದು ಬಿದ್ದಿದೆ  ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಈ ಘಟನೆಯ ವೇಳೆ ಅಂಗನವಾಡಿ ಕೇಂದ್ರದಲ್ಲಿ 25 ಪುಟಾಣಿಗಳಿದ್ದರು ಎನ್ನಲಾಗಿದೆ. ಹಂಚು ಬಿದ್ದ ಸದ್ದು ಕೇಳಿದಾಗ ಮಕ್ಕಳು ಹೆದರಿ ಹೊರಗೆ ಓಡಿ ಹೋಗಿದ್ದಲ್ಲದೆ, ಇನ್ನು ಕೆಲ ಮಕ್ಕಳನ್ನು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಹೋಗಿದ್ದಾರೆ.

ಅಂಗನವಾಡಿ ಕೇಂದ್ರ ರಿಪೇರಿ ಅಗುವವರೆಗೆ ಬದಲಿ ವ್ಯವಸ್ಥೆ ಮಾಡುವಂತೆ ಸ್ಥಳಕ್ಕೆ ಭೇಟಿ ನೀಡಿದ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ತಿಳಿಸಿದ್ದಾರೆ. ತಾಪಂ ಸದಸ್ಯ ಪ್ರಭಾಕರ ಪ್ರಭು, ಗ್ರಾಪಂ ಸದಸ್ಯ ದೇವಪ್ಪ ಕರ್ಕೇರ ಮತ್ತಿತರರು ಭೇಟಿ ನೀಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News