ಇವಿಎಂ-ವಿವಿಪ್ಯಾಟ್ ತಿರುಚಲು ಸಾಧ್ಯ

Update: 2019-10-23 18:07 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಅ.23: 2019ರ ಲೋಕಸಭಾ ಚುನಾವಣೆ ಬಳಿಕ ಇವಿಎಂ ಹಾಗೂ ವಿವಿಪ್ಯಾಟ್ ಗಳ ದಕ್ಷತೆ ಕುರಿತು thequint.com  ಸರಣಿ ತನಿಖಾ ವರದಿಗಳನ್ನು ಪ್ರಕಟಿಸುತ್ತಿದ್ದು, ಅಕ್ಟೋಬರ್ 22ರಂದು ಪ್ರಕಟವಾದ ಪೂನಂ ಅಗರ್ವಾಲ್ ಅವರ ತನಿಖಾ ವರದಿಯಲ್ಲಿ ಇವಿಎಂ ಹಾಗೂ ವಿವಿಪ್ಯಾಟ್‌ಗಳನ್ನು ತಿರುಚಲು ಸಾಧ್ಯ ಎಂದು ಹೇಳಲಾಗಿದೆ. ಅವರು ಬಹಿರಂಗ ಪಡಿಸಿದ ವರದಿಯ ಸಾರಾಂಶ ಕೆಳಗಿನಂತಿದೆ.

ತಮ್ಮ ಮತವು ವಿದ್ಯುನ್ಮಾನ ಮತದಾನ ಯಂತ್ರದಲ್ಲಿ ಸರಿಯಾಗಿ ದಾಖಲಾಗಿದೆ ಎನ್ನುವುದನ್ನು ಮತದಾರರಿಗೆ ಖಚಿತಪಡಿಸುವ ಉದ್ದೇಶದಿಂದ ಸರ್ವೋಚ್ಚ ನ್ಯಾಯಾಲಯದ 2013ರ ಆದೇಶದಂತೆ ವಿವಿಪ್ಯಾಟ್ ಯಂತ್ರವನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಸೇರ್ಪಡೆಗೊಳಿಸಲಾಗಿತ್ತು.

‘ಇವಿಎಮ್‌ನಲ್ಲಿ ಮತದಾನದ ಬಳಿಕ ವಿವಿಪ್ಯಾಟ್‌ನಿಂದ ಮುದ್ರಿತ ರಸೀದಿಯು ತಮ್ಮ ಮತವು ಸರಿಯಾಗಿ ದಾಖಲಾಗಿದೆ ಎನ್ನುವುದನ್ನು ಮತದಾರರಿಗೆ ದೃಢಪಡಿಸುತ್ತದೆ’ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿತ್ತು.

ಆದರೆ ವಿವಿಪ್ಯಾಟ್ ಯಂತ್ರವು ಚುನಾವಣಾ ಪ್ರಕ್ರಿಯೆಯನ್ನು ದೋಷ ಮುಕ್ತವಾಗಿಸಿದೆಯೇ?

ಇದಕ್ಕೆ ಉತ್ತರ ‘ಇಲ್ಲ’

ಇವಿಎಂ-ವಿವಿಪ್ಯಾಟ್‌ಗಳನ್ನು ತಿರುಚಲು ಸಾಧ್ಯವೇ?

ದುರದೃಷ್ಟವಶಾತ್ ಇದಕ್ಕೆ ಉತ್ತರ ‘ಹೌದು’

2019ರ ಲೋಕಸಭಾ ಚುನಾವಣೆಯಲ್ಲಿ ನೀವು ಮತ ಚಲಾಯಿಸಿದಾಗ ಇವಿಎಂನ ಬ್ಯಾಲೆಟ್ ಯೂನಿಟ್‌ನ ಪಕ್ಕದಲ್ಲಿಯೇ ವಿವಿಪ್ಯಾಟ್ ಯಂತ್ರವನ್ನು ಇರಿಸಿದ್ದನ್ನು ಖಂಡಿತ ಗಮನಿಸಿರಬೇಕು.

ಚುನಾವಣಾ ಆಯೋಗವೇನೋ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಿತ್ತು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ವಿವಿಪ್ಯಾಟ್ ಯಂತ್ರಗಳನ್ನು ಸೇರಿಸಿತ್ತು. ಆದರೆ ಇಲ್ಲೊಂದು ಭಾರೀ ತಾಂತ್ರಿಕ ಲೋಪವಿದ್ದು,ಇದು ಇಡೀ ಉದ್ದೇಶವನ್ನೇ ವಿಫಲಗೊಳಿಸಿದೆ.

ಸರಳವಾಗಿ ಹೇಳಬೇಕೆಂದರೆ ಇವಿಎಂ ಅನ್ನು ಕಂಪ್ಯೂಟರ್, ಬ್ಯಾಲೆಟ್ ಯೂನಿಟ್ ಅನ್ನು ಕೀಬೋರ್ಡ್ ಮತ್ತು ಅದರ ಕಂಟ್ರೋಲ್ ಯೂನಿಟ್‌ನ್ನು ಕಂಪ್ಯೂಟರ್‌ನ ಹಾರ್ಡ್ ಡ್ರೈವ್ ಎಂದು ಭಾವಿಸೋಣ ಮತ್ತು ವಿವಿಪ್ಯಾಟ್ ಯಂತ್ರವನ್ನು ಕಂಪ್ಯೂಟರ್‌ಗೆ ಸಂರ್ಕಿಸಿದ ಪ್ರಿಂಟರ್ ಎಂದು ಪರಿಗಣಿಸೋಣ.

ಪ್ರತಿ ಬಾರಿ ಬ್ಯಾಲೆಟ್ ಯೂನಿಟ್‌ನಲ್ಲಿ ಮತವನ್ನು ದಾಖಲಿಸಿದಾಗ ಅದು ಇವಿಎಮ್‌ನ ಕಂಟ್ರೋಲ್ ಯೂನಿಟ್‌ನ ಮೆಮರಿಯಲ್ಲಿ ಸಂಗ್ರಹಗೊಳ್ಳಬೇಕು. ಬಳಿಕ ವಿವಿಪ್ಯಾಟ್‌ನಿಂದ ಮುದ್ರಿತ ರಸೀದಿಯು ಮತದಾರ ಇವಿಎಮ್‌ನಲ್ಲಿ ಒತ್ತಿದ ಗುಂಡಿಗೆ ಅನುಗುಣವಾಗಿ ಮತವು ಬಿದ್ದಿದೆ ಎನ್ನುವುದನ್ನು ದೃಢಪಡಿಸಬೇಕು.

ಈ ಮಾಹಿತಿಯು ಬ್ಯಾಲೆಟ್ ಯೂನಿಟ್‌ನಿಂದ ಕಂಟ್ರೋಲ್ ಯೂನಿಟ್‌ಗೆ ಮತ್ತು ಅಲ್ಲಿಂದ ವಿವಿಪ್ಯಾಟ್ ಯಂತ್ರಕ್ಕೆ ರವಾನೆಯಾಗಬೇಕು.

ಆದರೆ ಇವಿಎಮ್‌ಗಳು ಮತ್ತು ವಿವಿಪ್ಯಾಟ್ ಯಂತ್ರಗಳನ್ನು ಹೀಗೆ ಜೋಡಿಸಲಾಗಿರಲಿಲ್ಲ ಎನ್ನುವುದನ್ನು thequint ಪತ್ತೆ ಹಚ್ಚಿದೆ.

ಹಾಲಿ ಚುನಾವಣಾ ಪ್ರಕ್ರಿಯೆಯಲ್ಲಿ ವಿವಿಪ್ಯಾಟ್ ಯಂತ್ರವನ್ನು ಬ್ಯಾಲೆಟ್‌ಯೂನಿಟ್ ಮತ್ತು ಕಂಟ್ರೋಲ್ ಯೂನಿಟ್ ನಡುವೆ ಇರಿಸಲಾಗುತ್ತಿದೆ.

ಹೀಗಾಗಿ ಬ್ಯಾಲೆಟ್ ಯೂನಿಟ್ ಮತವನ್ನು ಮೊದಲು ವಿವಿಪ್ಯಾಟ್ ಯಂತ್ರಕ್ಕೆ ರವಾನಿಸುತ್ತದೆ ಮತ್ತು ಅದು ಮತದಾನದ ಮುದ್ರಿತ ರಸೀದಿಯನ್ನು ನೀಡುತ್ತದೆ. ಬಳಿಕ ಈ ಮಾಹಿತಿಯು ಕಂಟ್ರೋಲ್ ಯೂನಿಟ್‌ನ ಮೆಮರಿಯಲ್ಲಿ ದಾಖಲಾಗುತ್ತದೆ. ಮತವು ಮೊದಲು ವಿವಿಪ್ಯಾಟ್ ಯಂತ್ರದಲ್ಲಿ ದಾಖಲಾದ ಬಳಿಕ ಇವಿಎಮ್‌ನ ಕಂಟ್ರೋಲ್ ಯೂನಿಟ್ ಅದನ್ನು ದಾಖಲಿಸಿಕೊಳ್ಳುತ್ತದೆ.

ಇದೇಕೆ ಮಹತ್ವದ್ದು ಎಂದು ನೀವು ಕೇಳಬಹುದು.

ವಿವಿಪ್ಯಾಟ್ ವ್ಯವಸ್ಥೆ ಜಾರಿಗೆ ಬರುವ ಮೊದಲು ಚುನಾವಣೆಗಳಲ್ಲಿ ತನ್ನ ಬ್ಯಾಲೆಟ್ ಯೂನಿಟ್‌ನಲ್ಲಿ ಯಾವ ಗುಂಡಿಯನ್ನು ಒತ್ತಲಾಗಿದೆ ಎನ್ನುವುದಷ್ಟನ್ನೇ ಇವಿಎಂ ದಾಖಲಿಸಿಕೊಳ್ಳುತ್ತಿತ್ತು. ಆ ಗುಂಡಿ ಯಾವ ಪಕ್ಷದ ಅಭ್ಯರ್ಥಿಯದು ಎನ್ನುವುದು ಅದಕ್ಕೆ ಗೊತ್ತಿರುತ್ತಿರಲಿಲ್ಲ. ಆದರೆ ವಿವಿಪ್ಯಾಟ್ ಯಂತ್ರವು ತನ್ನ ಕೆಲಸವನ್ನು ಮಾಡಬೇಕಿದ್ದರೆ ಬ್ಯಾಲೆಟ್ ಯೂನಿಟ್‌ನಲ್ಲಿಯ ಪ್ರತಿಯೊಂದು ಗುಂಡಿಯೂ ಯಾವ ಪಕ್ಷ ಮತ್ತು ಯಾವ ಅಭ್ಯರ್ಥಿಯನ್ನು ಪ್ರತಿನಿಧಿಸುತ್ತದೆ ಎನ್ನುವ ಮಾಹಿತಿಯನ್ನು ಅದಕ್ಕೆ ಒದಗಿಸಬೇಕಾಗುತ್ತದೆ.

ಈಗ ಪಕ್ಷದ ಚಿಹ್ನೆ ಮತ್ತು ಅಭ್ಯರ್ಥಿಯ ಹೆಸರನ್ನು ಒಳಗೊಂಡ ಸಾಫ್ಟ್‌ವೇರ್ ಅನ್ನು ಲ್ಯಾಪ್‌ಟಾಪ್‌ಗಳ ಮೂಲಕ ವಿವಿಪ್ಯಾಟ್ ಯಂತ್ರಗಳಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ. ಮತದಾನದ ದಿನಾಂಕಕ್ಕಿಂತ ಮೊದಲಿನ ಎರಡು ವಾರಗಳ ಅವಧಿಯಲ್ಲಿ ಬಿಇಎಲ್ ಅಥವಾ ಇಸಿಐಎಲ್‌ನಂತಹ ಇವಿಎಂ ತಯಾರಿಕೆ ಕಂಪೆನಿಗಳಿಗಾಗಿ ಕಾರ್ಯ ನಿರ್ವಹಿಸುವ ಇಂಜಿನಿಯರ್‌ಗಳು ಈ ಕೆಲಸವನ್ನು ಮಾಡುತ್ತಾರೆ.

ಯಾರಾದರೂ ಚುನಾವಣಾ ಫಲಿತಾಂಶವನ್ನು ತಿರುಚಲು ಬಯಸಿದ್ದರೆ ಅವರು ಸೂಕ್ಷ್ಮ ಮಾಹಿತಿಗಳನ್ನು ವಿವಿಪ್ಯಾಟ್ ಯಂತ್ರಗಳಲ್ಲಿ ಅಪ್‌ಲೋಡ್ ಮಾಡುತ್ತಿರುವಾಗ ಬಾಹ್ಯ ಸಾಧನವೊಂದರ,ಅಂದರೆ ಲ್ಯಾಪ್‌ಟಾಪ್‌ನ ಮೂಲಕ ಮಾಲ್‌ವೇರ್‌ವೊಂದನ್ನು ಅದರಲ್ಲಿ ಸೇರಿಸಬಹುದು.

ಇವಿಎಂ ಕಂಟ್ರೋಲ್ ಯೂನಿಟ್‌ನಲ್ಲಿ ದಾಖಲಾದ ಮತದ ಮೇಲೆ ಈ ಮಾಲ್‌ವೇರ್ ತನ್ನ ಹಿಡಿತವನ್ನು ಸಾಧಿಸಬಲ್ಲದು: ತಜ್ಞರು

2019ರ ಲೋಕಸಭಾ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಮತ್ತು ಇಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವೀಧರರಾಗಿರುವ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಅವರನ್ನು 'ದಿ ಕ್ವಿಂಟ್' ಮಾತನಾಡಿಸಿದಾಗ ಮಾಲ್‌ವೇರ್ ಹೇಗೆ ಇವಿಎಂ ಮತಗಳಲ್ಲಿ ಹಸ್ತಕ್ಷೇಪ ಮಾಡಬಲ್ಲದು ಎನ್ನುವುದನ್ನು ಅವರು ವಿವರಿಸಿದ್ದು ಹೀಗೆ:

ವಿವಿಪ್ಯಾಟ್ ಯಂತ್ರವನ್ನು ಬಾಹ್ಯ ಸಾಧನವೊಂದಕ್ಕೆ ಜೋಡಿಸಲಾಗುತ್ತದೆ ಮತ್ತು ಈ ಸ್ಥಿತಿಯಲ್ಲಿ ಮಾಲ್‌ವೇರ್ ಕಾಣಿಸಿಕೊಳ್ಳುತ್ತದೆ. ಈಗ ನೀವು ಬ್ಯಾಲೆಟ್ ಯೂನಿಟ್‌ನಲ್ಲಿ ಯಾವ ಗುಂಡಿಯನ್ನು ಒತ್ತಿದ್ದೀರೋ ಅದನ್ನೇ ವಿವಿಪ್ಯಾಟ್ ಕೂಡ ತೋರಿಸುತ್ತಿದೆ ಎಂದು ಭಾವಿಸೋಣ. ಹೀಗಾಗಿ ಮತದಾರ ವಿವಿಪ್ಯಾಟ್‌ನ ಮುದ್ರಿತ ರಸೀದಿಯನ್ನು ವೀಕ್ಷಿಸಿದಾಗ, ತಾನು ಒತ್ತಿದ ಮತ ತನ್ನ ಆಯ್ಕೆಯ ಅಭ್ಯರ್ಥಿಗೇ ಬಿದ್ದಿದೆ ಎಂದು ತೃಪ್ತಿಗೊಳ್ಳುತ್ತಾನೆ. ಆದರೆ ವಿವಿಪ್ಯಾಟ್‌ನಿಂದ ಇವಿಎಮ್‌ನ ಕಂಟ್ರೋಲ್ ಯೂನಿಟ್‌ಗೆ ರವಾನೆಯಾಗುವಾಗ ಏನಾಗುತ್ತದೆ ಎನ್ನುವುದು ನಮಗೆ ಗೊತ್ತಿರುವುದಿಲ್ಲ.

ಕಂಟ್ರೋಲ್ ಯೂನಿಟ್‌ಗೆ ಬೇರೆಯದೇ ಮಾಹಿತಿಯನ್ನು ರವಾನಿಸುವ ಸಾಮರ್ಥ್ಯ ಮಾಲ್‌ವೇರ್‌ಗಿದೆ ಎಂದು ಭಾವಿಸೋಣ. ಹೀಗಿದ್ದಾಗ ಮತದಾರ ನಂ.1 ಅಥವಾ ನಂ.2 ಗುಂಡಿಯನ್ನು ಒತ್ತಿದ್ದಾನೆ, ಆದರೆ ಈ ಮಾಲ್‌ವೇರ್ ಮೂಲಕ ವಿವಿಪ್ಯಾಟ್ ಇತರ ಯಾವುದೋ ಸಂಕೇತವನ್ನು ಕಂಟ್ರೋಲ್ ಯೂನಿಟ್‌ನೊಂದಿಗೆ ಹಂಚಿಕೊಳ್ಳುತ್ತದೆ. ಉದಾಹರಣೆಗೆ ಮತದಾರ ನಂ.1 ಅಭ್ಯರ್ಥಿಯ ಗುಂಡಿಯನ್ನು ಒತ್ತಿದ್ದಾನೆ ಎಂದಿಟ್ಟುಕೊಳ್ಳೋಣ ಮತ್ತು ವಿವಿಪ್ಯಾಟ್ ರಸೀದಿಯ ಮೇಲೆ ನಂ.1 ಎಂದು ಮುದ್ರಿಸುತ್ತದೆ,ಆದರೆ ನಂ.2 ಅಭ್ಯರ್ಥಿಯ ಸಂಕೇತವನ್ನು ಕಂಟ್ರೋಲ್ ಯೂನಿಟ್‌ನೊಂದಿಗೆ ಹಂಚಿಕೊಳ್ಳುತ್ತದೆ. ಚಾಣಾಕ್ಷ ಹಸ್ತಕ್ಷೇಪ ಇಲ್ಲಿ ಸಾಧ್ಯವಿದೆ. ಈ ಸಮಯದಲ್ಲಿ ಕಂಟ್ರೋಲ್ ಯೂನಿಟ್‌ನಲ್ಲಿ ಏನು ದಾಖಲಾಗಿದೆ ಎನ್ನುವುದನ್ನು ತಿಳಿದುಕೊಳ್ಳಲು ಮತದಾರನಿಗೆ ಯಾವುದೇ ಮಾರ್ಗವಿರುವುದಿಲ್ಲ.

ಈಗ ಈ ಭೀತಿ ನಿಜವಾಗಿರುವುದು ಏಕೆ?

ವಿವಿಪ್ಯಾಟ್ ಯಂತ್ರಗಳಿಗೆ ಈ ಸೂಕ್ಷ್ಮ ಮಾಹಿತಿಗಳನ್ನು ಅಪ್‌ಲೋಡ್ ಮಾಡುವ ಇಂಜಿನಿಯರ್‌ಗಳು ಖಾಸಗಿ ಕಂಪೆನಿಗಳಿಂದ ಬಂದಿರುತ್ತಾರೆ ಎನ್ನುವುದನ್ನು thequint ಈಗಾಗಲೇ ತನ್ನ ಹಿಂದಿನ ವರದಿಯೊಂದರಲ್ಲಿ ಬೆಳಕಿಗೆ ತಂದಿದೆ. ಅಸಲಿಗೆ 2017-18ನೇ ಸಾಲಿನಲ್ಲಿ ಚುನಾವಣೆಗಳಿಗಾಗಿ ಚುನಾವಣಾ ಆಯೋಗಕ್ಕೆ ಇಂಜಿನಿಯರ್‌ಗಳನ್ನು ಒದಗಿಸಿದ್ದ ಖಾಸಗಿ ಕಂಪೆನಿಯು ಇವಿಎಂ ತಯಾರಿಕೆ ಕಂಪೆನಿ ಇಸಿಐಎಲ್‌ನಲ್ಲಿ ನೋಂದಣಿಯೇ ಆಗಿರಲಿಲ್ಲ.

ನಮ್ಮ ಚುನಾವಣಾ ಪ್ರಕ್ರಿಯೆಯು ಸುರಕ್ಷಿತ ಮತ್ತು ಸುಭದ್ರವಾಗಿದೆ ಎಂದು ನಾವೂ ಈಗಲೂ ಪರಿಗಣಿಸಬಹುದೇ?

ಇದಕ್ಕೆ ಉತ್ತರ ಸ್ಪಷ್ಟವಾಗಿ ‘ಇಲ್ಲ’ಎಂದೇ ಆಗಿದೆ.

randomisation ಇದು ಚುನಾವಣಾ ಆಯೋಗವು ಇವಿಎಮ್‌ಗಳ ಸುರಕ್ಷತೆಯ ಬಗ್ಗೆ ಹೇಳಿಕೊಂಡಿರುವ ಇನ್ನೊಂದು ಸಮರ್ಥನೆಯಾಗಿದೆ. randomisation ಅಂದರೆ ಯಾವ ಇವಿಎಂ-ವಿವಿಪ್ಯಾಟ್ ಯಾವ ಮತಕ್ಷೇತ್ರಕ್ಕೆ ರವಾನೆಯಾಗಿದೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ, ಹೀಗಾಗಿ ಅವುಗಳಲ್ಲಿ ಹಸ್ತಕ್ಷೇಪ ನಡೆಸಲು ಸಾಧ್ಯವೇ ಇಲ್ಲ ಎಂದು ಆಯೋಗವು ಸಾಧಿಸುತ್ತಿದೆ.

ಆದರೆ ಈ ವಾದ ಈಗ ಠುಸ್ ಎಂದಿದೆ! ಏಕೆ?

ವಿವಿಪ್ಯಾಟ್ ಯಂತ್ರ ತನ್ನ ಕೆಲಸವನ್ನು ಮಾಡಲು ಅದಕ್ಕೆ ಪ್ರತಿ ಮತಕ್ಷೇತ್ರಕ್ಕೆ ನಿರ್ದಿಷ್ಟವಾದ ಅಭ್ಯರ್ಥಿಗಳು ಮತ್ತು ಪಕ್ಷಗಳ ಹೆಸರುಗಳನ್ನು ಒದಗಿಸಬೇಕಾಗುತ್ತದೆ. ಅಂದರೆ ವಿವಿಪ್ಯಾಟ್ ಯಂತ್ರವೊಂದು ಯಾವ ಮತಕ್ಷೇತ್ರಕ್ಕೆ ರವಾನೆಯಾಗಲಿದೆ ಎನ್ನುವುದು ನಿರ್ಧಾರಗೊಂಡ ಬಳಿಕವೇ ಅದಕ್ಕೆ ಈ ಮಾಹಿತಿಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ.

thequint ಚುನಾವಣಾ ಆಯೋಗಕ್ಕೆ ಈ ಮೂರು ಪ್ರಮುಖ ಪ್ರಶ್ನೆಗಳನ್ನು ಕೇಳಿತ್ತು

►ಕಂಟ್ರೋಲ್ ಯೂನಿಟ್‌ನ್ನು ತಲುಪುವ ಮಾಹಿತಿಯನ್ನು ವಿವಿಪ್ಯಾಟ್ ಯಂತ್ರವೇಕೆ ನಿಯಂತ್ರಿಸುತ್ತದೆ?

►ಆ ಮಾಹಿತಿ ನೇರವಾಗಿ ಕಂಟ್ರೋಲ್ ಯೂನಿಟ್ ಅನ್ನು ಯಾಕೆ ತಲುಪುವುದಿಲ್ಲ?

►ಈ ದೋಷವು ವಿವಿಪ್ಯಾಟ್-ಇವಿಎಂ ತಿರುಚಲು ಸುಲಭ ವಾಗಿಸಿದೆಯೇ?

ಚುನಾವಣಾ ಆಯೋಗವು ಈ ಯಾವುದೇ ಪ್ರಶ್ನೆಗೆ ಈವರೆಗೆ ಉತ್ತರಿಸಿಲ್ಲ.

ಕೃಪೆ: thequint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News