×
Ad

ಚಾಂಪಿಯನ್ ಭಾರತಕ್ಕೆ ಶ್ರೀಲಂಕಾ ಮೊದಲ ಎದುರಾಳಿ

Update: 2019-10-24 23:53 IST

ದುಬೈ, ಅ.24: ದಕ್ಷಿಣ ಆಫ್ರಿಕಾದ ಬ್ಲೋಮ್ ಫೊಂಟೇನ್‌ನ ಮಾನ್‌ಗ್ವಾಂಗ್ ಓವಲ್‌ನಲ್ಲಿ ಮುಂದಿನ ವರ್ಷದ ಜನವರಿ 19ರಂದು ಶ್ರೀಲಂಕಾ ವಿರುದ್ಧ ಸೆಣಸಾಡುವುದರೊಂದಿಗೆ ಹಾಲಿ ಚಾಂಪಿಯನ್ ಭಾರತ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)2020ರ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. 16 ತಂಡಗಳು ಭಾಗವಹಿಸಲಿರುವ ಟೂರ್ನಿಯು ನಾಲ್ಕು ನಗರಗಳಲ್ಲಿ, 8 ತಾಣಗಳಲ್ಲಿ ಜ.17ರಿಂದ ಫೆ.9ರ ತನಕ ನಡೆಯಲಿದೆ. ದಕ್ಷಿಣ ಆಫ್ರಿಕಾ ತಂಡ 1998ರಲ್ಲಿ ಅಂಡರ್-19 ವಿಶ್ವಕಪ್‌ನ ಆತಿಥ್ಯವಹಿಸಿಕೊಂಡಿತ್ತು. 2014ರಲ್ಲಿ ಚಾಂಪಿಯನ್ ಆಗಿತ್ತು.

ನಾಲ್ಕು ಬಾರಿಯ ಚಾಂಪಿಯನ್ ಭಾರತ ಜ.17ರಂದು ಆರಂಭವಾಗಲಿರುವ ಟೂರ್ನಮೆಂಟ್‌ನಲ್ಲಿ ಎ ಗುಂಪಿನಲ್ಲಿ ನ್ಯೂಝಿಲ್ಯಾಂಡ್, ಶ್ರೀಲಂಕಾ ಹಾಗೂ ಜಪಾನ್ ತಂಡಗಳೊಂದಿಗೆ ಸ್ಥಾನ ಪಡೆದಿದೆ.

ನ್ಯೂಝಿಲ್ಯಾಂಡ್‌ನಲ್ಲಿ ನಡೆದ ಕಳೆದ ಆವೃತ್ತಿಯಲ್ಲಿ ಟ್ರೋಫಿ ಜಯಿಸಿದ್ದ ಭಾರತ ತಂಡ ಮೊದಲ ಬಾರಿ ಐಸಿಸಿ ಟೂರ್ನಿಯಲ್ಲಿ ಸ್ಪರ್ಧಿಸುತ್ತಿರುವ ಜಪಾನ್ ಹಾಗೂ ನ್ಯೂಝಿಲ್ಯಾಂಡ್ ತಂಡಗಳನ್ನು ಕ್ರಮವಾಗಿ ಜ.21 ಹಾಗೂ 24ರಂದು ಎದುರಿಸಲಿದೆ. ಫೈನಲ್ ಪಂದ್ಯ ಫೆ.9ಕ್ಕೆ ನಿಗದಿಯಾಗಿದೆ.

ಕಳೆದ ಬಾರಿಯ ರನ್ನರ್ಸ್-ಅಪ್ ಹಾಗೂ ಮೂರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ಬಿ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಬಿ ಗುಂಪಿನಲ್ಲಿ ಇಂಗ್ಲೆಂಡ್ ಹಾಗೂ ನೈಜೀರಿಯ ತಂಡಗಳಿವೆ.

ಸಿ ಗುಂಪಿನಲ್ಲಿರುವ ಪಾಕಿಸ್ತಾನ ತಂಡ ಬಾಂಗ್ಲಾದೇಶ, ಝಿಂಬಾಬ್ವೆ ಹಾಗೂ ಸ್ಕಾಟ್ಲೆಂಡ್ ವಿರುದ್ಧ ಹೋರಾಟ ನಡೆಸಲಿದೆ.

 ಆತಿಥೇಯ ದಕ್ಷಿಣ ಆಫ್ರಿಕಾ ಜ.17ರಂದು ಅಫ್ಘಾನಿಸ್ತಾನ ವಿರುದ್ಧ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಡಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ ತಂಡದೊಂದಿಗೆ ಯುಎಇ ಹಾಗೂ ಕೆನಡಾ ತಂಡಗಳು ಸ್ಥಾನ ಪಡೆದಿವೆ.

13ನೇ ಆವೃತ್ತಿಯ ಟೂರ್ನಮೆಂಟ್‌ನ ಎರಡನೇ ಹಂತದಲ್ಲಿ ತಂಡಗಳನ್ನು ಸೂಪರ್ ಲೀಗ್ ಹಾಗೂ ಪ್ಲೇಟ್ ಟೂರ್ನಮೆಂಟ್ ಎಂದು ವಿಭಜಿಸಲಾಗುತ್ತದೆ. ನಾಲ್ಕು ಗುಂಪುಗಳಲ್ಲಿನ ಅಗ್ರ ಎರಡು ತಂಡಗಳು ಸೂಪರ್ ಲೀಗ್‌ಗೆ ತೇರ್ಗಡೆಯಾಗಲಿವೆ. ಉಳಿದ ತಂಡಗಳು ಪ್ಲೇಟ್ ಚಾಂಪಿಯನ್‌ಶಿಪ್‌ನಲ್ಲಿ ಸ್ಥಾನ ಪಡೆಯಲಿವೆ.

ಪೋಟ್‌ಚೆಫ್‌ಸ್ಟ್ರೂಮ್ ಎರಡು ಸೂಪರ್ ಲೀಗ್ ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳ ಆತಿಥ್ಯವಹಿಸಿ ಕೊಳ್ಳಲಿದೆ. ಕಳೆದ ನ್ಯೂಝಿಲ್ಯಾಂಡ್ ಆವೃತ್ತಿಯ ಟೂರ್ನಿಯಲ್ಲಿದ್ದ ಎಲ್ಲ 11 ಅಗ್ರ ಸದಸ್ಯರುಗಳು ಹಾಗೂ ಐದು ಪ್ರಾದೇಶಿಕ ಚಾಂಪಿಯನ್‌ಗಳು ಜನವರಿ 12ರಿಂದ 15ರ ತನಕ ಜೋಹಾನ್ಸ್ ಬರ್ಗ್ ಹಾಗೂ ಪ್ರಿಟೋರಿಯದಲ್ಲಿ ಅಭ್ಯಾಸ ಪಂದ್ಯವನ್ನು ಆಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News