ಜಮ್ಮು ಕಾಶ್ಮೀರ: 81 ಪ್ರದೇಶಾಭಿವೃದ್ಧಿ ಮಂಡಳಿಗಳಲ್ಲಿ ಬಿಜೆಪಿಗೆ ಜಯ
ಹೊಸದಿಲ್ಲಿ, ಅ.25: ಜಮ್ಮು ಮತ್ತು ಕಾಶ್ಮೀರದ 310 ಪ್ರದೇಶಾಭಿವೃದ್ಧಿ ಮಂಡಳಿಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ 81ರಲ್ಲಿ ಜಯ ಸಾಧಿಸಿದೆ. ಪಕ್ಷೇತರರು 217 ಮಂಡಳಿಗಳಲ್ಲಿ ಗೆಲುವು ಪಡೆದಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಶೈಲೇಂದ್ರ ಕುಮಾರ್ ಘೋಷಿಸಿದ್ದಾರೆ.
ತನ್ನ ಮುಖಂಡರನ್ನು ಗೃಹಬಂಧನದಲ್ಲಿ ಇರಿಸಿರುವುದನ್ನು ಖಂಡಿಸಿ ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮತ್ತು ಸಿಪಿಐ(ಎಂ) ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದ್ದವು. ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ನಡೆದ ಪ್ರಥಮ ಚುನಾವಣೆಯಲ್ಲಿ ಶೇ.98.3ರಷ್ಟು ಮತದಾನವಾಗಿದೆ. 27 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದ್ದರಿಂದ 283 ಮಂಡಳಿಗಳಿಗೆ ಚುನಾವಣೆ ನಡೆದಿದೆ.
ಉಳಿದಂತೆ ಜಮ್ಮು ಕಾಶ್ಮೀರ ನ್ಯಾಷನಲ್ ಪ್ಯಾಂಥರ್ಸ್ ಪಕ್ಷ 8 ಮತ್ತು ಕಾಂಗ್ರೆಸ್ ಪಕ್ಷ ಒಂದರಲ್ಲಿ ಜಯ ಸಾಧಿಸಿದೆ. (ಕಾಂಗ್ರೆಸ್ ಪಕ್ಷ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಪ್ರಕಟಿಸುವ ಮೊದಲೇ ಕಾಂಗ್ರೆಸ್‌ನಿಂದ ಓರ್ವ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ). ಪ್ರದೇಶಾಭಿವೃದ್ಧಿ ಮಂಡಳಿಗೆ ನಡೆದ ಚುನಾವಣೆಯಲ್ಲಿ ವಿಜೇತರಾದವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದು ಈ ಚುನಾವಣೆ ನವ ಮತ್ತು ಯುವ ನಾಯಕತ್ವದ ಉದಯವನ್ನು ಘೋಷಿಸಿದೆ ಎಂದಿದ್ದಾರೆ.
ಚುನಾವಣೆ ಯಶಸ್ವಿಯಾಗಿರುವುದು ಜನತೆಗೆ ಪ್ರಜಾಪ್ರಭುತ್ವದ ಮೇಲೆ ಇರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದವರು ಟ್ವೀಟ್ ಮಾಡಿದ್ದಾರೆ. ಭಾರತದ ಸಂಸತ್ತು ಆಗಸ್ಟ್‌ನಲ್ಲಿ ಕೈಗೊಂಡಿರುವ ಐತಿಹಾಸಿಕ ನಿರ್ಧಾರದಿಂದಾಗಿ ಜಮ್ಮು ಮತ್ತು ಕಾಶ್ಮೀರದ ಜನತೆ ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಸಾಧ್ಯವಾಗಿರುವುದಕ್ಕೆ ಹೆಮ್ಮೆಯಿದೆ . ಚುನಾವಣೆ ಅತ್ಯಂತ ಶಾಂತಿಯುತವಾಗಿ ನಡೆದಿದೆ. ಇದು ಜನತೆಗೆ ಪ್ರಜಾಪ್ರಭುತ್ವದ ಮೇಲಿರುವ ವಿಶ್ವಾಸ ಹಾಗೂ ತಳಮಟ್ಟದ ಆಡಳಿತಕ್ಕೆ ಅವರು ನೀಡುವ ಮಹತ್ವವನ್ನು ಸೂಚಿಸುತ್ತದೆ ಎಂದು ಮೋದಿ ಹೇಳಿದ್ದಾರೆ.