ಅಧಿಕಾರದ ಆಸೆಗಾಗಿ ಬಿಜೆಪಿ ನೈತಿಕ ಧ್ಯೇಯ ಮರೆಯಕೂಡದು: ಉಮಾಭಾರತಿ

Update: 2019-10-25 17:33 GMT

ಹೊಸದಿಲ್ಲಿ,ಅ.25: ಹರ್ಯಾಣದಲ್ಲಿ ಸರಕಾರ ರಚನೆಗೆ ಬಿಜೆಪಿಯು ಪಕ್ಷೇತರರ ಬೆಂಬಲ ಪಡೆಯಲು ಕಸರತ್ತು ನಡೆಸುತ್ತಿರುವಂತೆಯೇ ಅಧಿಕಾರದ ಆಸೆಗಾಗಿ ಪಕ್ಷವು, ತನ್ನ ನೈತಿಕ ಧ್ಯೇಯವನ್ನು ಮರೆಯಬಾರದೆಂದು ಬಿಜೆಪಿ ಉಪಾಧ್ಯಕ್ಷೆ ಉಮಾಭಾರತಿ ಶುಕ್ರವಾರ ಕಿವಿಮಾತು ಹೇಳಿದ್ದಾರೆ. ಯುವತಿ ಹಾಗೂ ಆಕೆಯ ತಾಯಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಪಕ್ಷೇತರ ಶಾಸಕ ಗೋಪಾಲ್ ಕಾಂಡ ಅವರ ಬೆಂಬಲವನ್ನು ಅದು ಪಡೆಯಕೂಡದೆಂದು ಅವರು ಸರಣಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿಯು ತನ್ನ ನೈತಿಕ ಧ್ಯೇಯವನ್ನು ಮರೆಯಕೂಡದು ಹಾಗೂ ತನ್ನ ಕಾರ್ಯಕರ್ತರಷ್ಟೇ ‘ಶುಭ್ರ’ರಾದ ವ್ಯಕ್ತಿಗಳ ಬೆಂಬಲ ಪಡೆಯುವುದನ್ನು ಅದು ಖಚಿತಪಡಿಸಿಕೊಳ್ಳಬೇಕೆಂದು ಕೇಂದ್ರದ ಮಾಜಿ ಸಚಿವೆಯೂ ಆದ ಉಮಾಭಾರತಿ ಹೇಳಿದ್ದಾರೆ.

ಗೋಪಾಲ್ ಕಾಂಡ ಕ್ರಿಮಿನಲ್ ಹೌದೇ ಅಥವಾ ಅಮಾಯಕನೇ ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ. ಆದರೆ ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಆತನನ್ನು ದೋಷಮುಕ್ತನಾಗಲು ಸಾಧ್ಯವಿಲ್ಲ ಎಂದು ಉಮಾಭಾರತಿ ಹೇಳಿದ್ದಾರೆ.

 ಕಾಂಡ ಒಡೆತನದ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಮಾಜಿ ಗಗನಸಖಿಯೊಬ್ಬರು 2012ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾಂಡ ಅವರ ಕಿರುಕುಳದಿಂದ ಬೇಸತ್ತು ತಾನು ಸಾವಿಗೆ ಶರಣಾಗಿರುವುದಾಗಿ ಅಕೆ ಡೆತ್‌ನೋಟ್‌ನಲ್ಲಿ ತಿಳಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕಾಂಡ ವಿರುದ್ಧ ಅತ್ಯಾಚಾರದ ಆರೋಪ ದಾಖಲಿಸಿದ್ದರು ಹಾಗೂ ಯುವತಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವನ್ನು ಹೊರಿಸಿದ್ದರು. ಪ್ರಕರಣದ ವಿಚಾರಣೆ ಈಗ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಕಾಂಡ ಅವರ ಬೆಂಬಲವನ್ನು ಪಡೆಯುವ ಕುರಿತು ಪಕ್ಷದಲ್ಲಿ ತಲೆದೋರಿರುವ ಭಿನ್ನಾಭಿಪ್ರಾಯಗಳ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅನಿಲ್ ಜೈನ್ ಅವರು ಈ ವಿಷಯವು ತನ್ನ ಅರಿವಿಗೆ ಬಂದಿದ್ದು, ಆ ಬಗ್ಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News