ಗುಜರಾತ್ ಮೂಲದ ಸಂಸ್ಥೆಗೆ ಸಂಸತ್ತು ನವೀಕರಣ ಗುತ್ತಿಗೆ

Update: 2019-10-25 17:06 GMT

ಹೊಸದಿಲ್ಲಿ, ಅ.25: ಸಂಸತ್ತು ಮತ್ತು ಸೆಂಟ್ರಲ್ ವಿಸ್ಟಾದ ನವೀಕರಣ ಕಾಮಗಾರಿಯ ಗುತ್ತಿಗೆಯನ್ನು ಗುಜರಾತ್ ಮೂಲದ ಎಚ್‌ಸಿಪಿ ಡಿಸೈನ್, ಪ್ಲಾನಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆ ಪಡೆದಿದೆ ಎಂದು ಕೇಂದ್ರ ಪಿಡಬ್ಲ್ಯುಡಿ ಇಲಾಖೆಯ ಪ್ರಧಾನ ನಿರ್ದೇಶಕ ಪ್ರಭಾಕರ್ ಸಿಂಗ್ ಶುಕ್ರವಾರ ಹೇಳಿದ್ದಾರೆ.

ಈ ಸಂಸ್ಥೆಗೆ ಹಲವಾರು ನವೀಕರಣ ಕಾಮಗಾರಿ ನಿರ್ವಹಿಸಿದ ಅನುಭವವಿದೆ. ಸಂಸ್ಥೆಯ ಆಯ್ಕೆ ಪ್ರಕ್ರಿಯೆ ಸಂದರ್ಭ ಗುಣಮಟ್ಟಕ್ಕೆ ಶೇ.80ರಷ್ಟು ಆದ್ಯತೆ ನೀಡಲಾಗಿದೆ ಎಂದವರು ಹೇಳಿದ್ದಾರೆ. ವಸತಿ ಮತ್ತು ಗ್ರಾಮೀಣ ವ್ಯವಹಾರ ಇಲಾಖೆಯ ಅಧೀನದಲ್ಲಿರುವ ಕೇಂದ್ರ ಪಿಡಬ್ಲ್ಯುಡಿ ಇಲಾಖೆ ಸೆಪ್ಟಂಬರ್ 2ರಂದು ‘ಸಂಸತ್ತು ಭವನ ಕಟ್ಟಡ, ಕೇಂದ್ರ ಸಚಿವಾಲಯ ಮತ್ತು ಸೆಂಟ್ರಲ್ ವಿಸ್ಟ’ ದ ಅಭಿವೃದ್ಧಿ/ ನವೀಕರಣ ಕಾಮಗಾರಿಗೆ ಟೆಂಡರ್ ಆಹ್ವಾನಿಸಿತ್ತು. ರಾಷ್ಟ್ರಪತಿ ಭವನದ ಗೇಟ್‌ನಿಂದ ಇಂಡಿಯಾ ಗೇಟ್‌ವರೆಗಿನ 3 ಕಿಮೀ ವ್ಯಾಪ್ತಿಯ ಸಂಪೂರ್ಣ ಸೆಂಟ್ರಲ್ ವಿಸ್ಟಾದ ವಿನ್ಯಾಸ ಮರು ಯೋಜಿಸುವುದು ಟೆಂಡರ್ ಆಹ್ವಾನದ ಉದ್ದೇಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

 ನೂತನ ಯೋಜನೆಯು ನವಭಾರತದ ಮಹತ್ವ ಹಾಗೂ ಆಕಾಂಕ್ಷೆ, ಉತ್ತಮ ಆಡಳಿತ, ಕಾರ್ಯದಕ್ಷತೆ, ಪಾರದರ್ಶಕತೆ, ಉತ್ತರದಾಯಿತ್ವವನ್ನು ಪ್ರತಿನಿಧಿಸಬೇಕು ಮತ್ತು ಭಾರತದ ಸಂಸ್ಕೃತಿ ಮತ್ತು ಸಾಮಾಜಿಕ ಪರಿಸರದ ಆಧಾರ ಹೊಂದಿರಬೇಕು ಎಂದು ಟೆಂಡರ್ ಆಹ್ವಾನದಲ್ಲಿ ತಿಳಿಸಲಾಗಿದೆ. 2020ರ ನವೆಂಬರ್‌ನೊಳಗೆ ಸೆಂಟ್ರಲ್ ವಿಸ್ಟದ ಮರುವಿನ್ಯಾಸ ಕಾರ್ಯ ಪೂರ್ಣಗೊಳಿಸುವ ಮತ್ತು ನಂತರದ ನಾಲ್ಕು ವರ್ಷದೊಳಗೆ ಸಂಸತ್ತು ಭವನದ ನವೀಕರಣ ಕಾರ್ಯ ಪೂರ್ಣಗೊಳ್ಳುವ ಉದ್ದೇಶವಿದೆ. ಸಂಸತ್ತನ್ನು ಹೊರಭಾಗದ ವಿನ್ಯಾಸವನ್ನು ಉಳಿಸಿಕೊಂಡು ನವೀಕರಿಸುವುದು ಅಥವಾ ಹತ್ತಿರದಲ್ಲೇ ಅತ್ಯಾಧುನಿಕ ವಿನ್ಯಾಸದ ಕಟ್ಟಡದ ರಚನೆ - ಎಂದು ಟೆಂಡರ್‌ನಲ್ಲಿ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News