ದೀಪಾವಳಿ ಎಫೆಕ್ಟ್: ಇಡೀ ಉಡುಪಿ ನಗರದಲ್ಲಿ ಟ್ರಾಫಿಕ್ ಜಾಮ್!

Update: 2019-10-26 07:58 GMT

ಉಡುಪಿ, ಅ.26: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದ ಇಡೀ ಉಡುಪಿ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಇದರಿಂದ ಚಾಲಕರು ಹಾಗೂ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ನಗರದ ಪ್ರಮುಖ ರಸ್ತೆಯಾಗಿರುವ ಕೆ.ಎಂ.ಮಾರ್ಗ, ಉಡುಪಿ- ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕಲ್ಸಂಕ ಜಂಕ್ಷನ್, ಸಿಟಿ ಬಸ್ ನಿಲ್ದಾಣ, ಮಸೀದಿ ರಸ್ತೆ, ಮಾರುತಿ ವಿಥಿಕಾ ರಸ್ತೆ ಸೇರಿದಂತೆ ಎಲ್ಲ ರಸ್ತೆಗಳು ವಾಹನಗಳಿಂದ ತುಂಬಿ ಹೋಗಿವೆ.

ಹಬ್ಬದ ಖರೀದಿಗಾಗಿ ಸಾರ್ವಜನಿಕರು ಬೆಳಗ್ಗೆಯಿಂದಲೇ ತಮ್ಮ ವಾಹನಗಳಲ್ಲಿ ನಗರಕ್ಕೆ ಆಗಮಿಸಿದ ಪರಿಣಾಮ ಈ ಟ್ರಾಫಿಕ್ ಜಾಮ್ ಉಂಟಾಗಿದೆ ಎನ್ನಲಾಗಿದೆ. ವಾಹನ ದಟ್ಟನೆಯಿಂದ ಕೆಲವು ರಸ್ತೆಗಳಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ಸಂಚಾರದಲ್ಲಿ ವ್ಯತ್ಯಯ ಕಂಡುಬಂದಿದೆ. ಇದರಿಂದ ವಾಹನ ಚಾಲಕರು ಮಾತ್ರವಲ್ಲದೆ ಪಾದಚಾರಿಗಳು ಕೂಡ ರಸ್ತೆ ದಾಟಲು ಪರದಾಡು ತ್ತಿರುವುದು ಕಂಡುಬಂದಿದೆ.

ಕೆಲವು ರಸ್ತೆಗಳಲ್ಲಿ ಸಾರ್ವಜನಿಕರೇ ಟ್ರಾಫಿಕ್ ಜಾಮ್ ಕ್ಲಿಯರ್ ಮಾಡುತ್ತಿದ್ದಾರೆ. ಅದೇ ರೀತಿ ಪೊಲೀಸರು ಕೂಡ ಸುಗಮ ಸಂಚಾರಕ್ಕಾಗಿ ಹರಸಾಹಸ ಪಡುತ್ತಿದ್ದಾರೆ. ಕೆಲವು ಕಡೆ ಪೊಲೀಸರು ಇಲ್ಲದ ಕಾರಣ ಗಂಟೆಗಟ್ಟಲೆ ಸಂಚಾರ ಸಮಸ್ಯೆ ಉಂಟಾಗಿರುವುದು ಕಂಡುಬಂತು. ವಾಹನಗಳಲ್ಲಿ ನಗರದಿಂದ ಹೊರಗಡೆ ಹೋಗಲು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News