ಹರ್ಯಾಣ ಸರಕಾರ ರಚಿಸಲು ಬಿಜೆಪಿ ನೇತೃತ್ವದ ಮೈತ್ರಿಗೆ ರಾಜ್ಯಪಾಲರ ಆಹ್ವಾನ

Update: 2019-10-26 17:44 GMT

ಚಂಡಿಗಢ, ಅ. 26: ಹರ್ಯಾಣದಲ್ಲಿ ಮುಂದಿನ ಸರಕಾರ ರಚಿಸಲು ರಾಜ್ಯಪಾಲ ಸತ್ಯದೇವ್ ನರೈನ್ ಆರ್ಯ ಬಿಜೆಪಿಗೆ ಆಹ್ವಾನ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿರುವ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.

ದುಷ್ಯಂತ ಚೌಟಾಲ ನೇತೃತ್ವದ ಜನನಾಯಕ ಜನತಾ ಪಾರ್ಟಿ (ಜೆಜೆಪಿ)ಯ ಬೆಂಬಲದೊಂದಿಗೆ ಹರ್ಯಾಣದಲ್ಲಿ ಸರಕಾರ ರಚಿಸುವುದಾಗಿ ಬಿಜೆಪಿ ಹಕ್ಕು ಮಂಡಿಸಿದ ಬಳಿಕ ರಾಜ್ಯಪಾಲರು ಈ ಆಹ್ವಾನ ನೀಡಿದ್ದಾರೆ.

ರವಿವಾರ ಸರಕಾರ ರಚಿಸಲು ಹರ್ಯಾಣ ರಾಜ್ಯಪಾಲ ಆಹ್ವಾನ ನೀಡಿದ್ದಾರೆ ಎಂದು ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.

ರವಿವಾರ ದೇಶಾದ್ಯಂತ ದೀಪಾವಳಿ ಆಚರಣೆ ನಡೆಸಲಾಗುತ್ತದೆ. ಅಂದು ಅಪರಾಹ್ನ 2.15ಕ್ಕೆ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ. ದುಷ್ಯಂತ ಚೌಟಾಲ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಖಟ್ಟರ್ ತಿಳಿಸಿದ್ದಾರೆ.

ಬಿಜೆಪಿ 40, ಜೆಜೆಪಿ 10 ಹಾಗೂ ಸ್ವತಂತ್ರ 7 ಶಾಸಕರು ಸೇರಿದಂತೆ ಒಟ್ಟು 57 ಶಾಸಕರು ಹರ್ಯಾಣದಲ್ಲಿ ಸರಕಾರ ರಚಿಸಲು ರಾಜ್ಯಪಾಲರ ಮುಂದೆ ಹಕ್ಕು ಮಂಡಿಸಿದ್ದಾರೆ ಎಂದು ಖಟ್ಟರ್ ಹೇಳಿದ್ದಾರೆ.

ರಾಜ್ಯಪಾಲರು ನಮ್ಮ ಮನವಿ ಸ್ವೀಕರಿಸಿದ್ದಾರೆ ಹಾಗೂ ರವಿವಾರ ಸರಕಾರ ರಚಿಸುವಂತೆ ಆಹ್ವಾನ ನೀಡಿದ್ದಾರೆ ಎಂದು ಖಟ್ಟರ್ ತಿಳಿಸಿದ್ದಾರೆ.

ಇದಕ್ಕಿಂತ ಮುನ್ನ ಮನೋಹರ್ ಲಾಲ್ ಖಟ್ಟರ್ ಹಾಗೂ ಅವರ ಸಂಪುಟದ ಸಹೋದ್ಯೋಗಿಗಳು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆಯನ್ನು ರಾಜ್ಯಪಾಲರು ಸ್ವೀಕರಿಸಿದ್ದರು. ನೂತನ ಸರಕಾರ ಅಸ್ತಿತ್ವಕ್ಕೆ ಬರುವ ವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಮುಂದುವರಿಸುವಂತೆ ರಾಜ್ಯಪಾಲರು ಖಟ್ಟರ್ ಅವರಿಗೆ ಸೂಚಿಸಿದರು.

ರವಿವಾರ ಕೆಲವು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ, ನಿರ್ದಿಷ್ಟವಾಗಿ ಎಷ್ಟು ಮಂದಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಖಟ್ಟರ್ ಸ್ಪಷ್ಟಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News