ಮಿಲಿಟರಿ ಗೇಮ್ಸ್: ಫೈನಲ್‌ನಲ್ಲಿ ಮುಗ್ಗರಿಸಿದ ದೀಪಕ್‌ಗೆ ಬೆಳ್ಳಿ

Update: 2019-10-26 18:02 GMT

ವುಹಾನ್(ಚೀನಾ),ಅ.26: ವಿಶ್ವ ಮಿಲಿಟರಿ ಗೇಮ್ಸ್ ನಲ್ಲಿ ಶನಿವಾರ ನಡೆದ ಪುರುಷರ ಲೈಟ್ ಫ್ಲೈ 46-49 ಕೆಜಿ ತೂಕ ವಿಭಾಗದ ಫೈನಲ್‌ನಲ್ಲಿ ಎಡವಿದ ಭಾರತದ ಬಾಕ್ಸರ್ ದೀಪಕ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಫೈನಲ್ ಹಣಾಹಣಿಯಲ್ಲಿ ದೀಪಕ್ ಕಝಖ್‌ಸ್ತಾನದ ಝುಸ್‌ಸುಪೊವ್ ಟಮ್ರಿಟಸ್ ವಿರುದ್ಧ 0-5 ಅಂತರದಿಂದ ಶರಣಾದರು.ಪಂದ್ಯ ಮುಗಿದ ಬಳಿಕ ದೀಪಕ್ ಹಾಗೂ ಕೋಚ್ ಜಯ ಸಿಂಗ್ ಪಾಟೀಲ್ ಫೈನಲ್ ಫೈಟ್‌ನಲ್ಲಿ ರೆಫರಿ ನೀಡಿರುವ ತೀರ್ಪಿನ ಬಗ್ಗೆ ಪ್ರಶ್ನೆ ಎತ್ತಿದರು.

‘‘ನಾನು ಉತ್ತಮವಾಗಿ ಆಡಿದ್ದೇನೆಂಬ ನಂಬಿಕೆ ಇದೆ. ಎದುರಾಳಿ ಬಾಕ್ಸರ್ ಅಷ್ಟೊಂದು ಚೆನ್ನಾಗಿ ಆಡಿರಲಿಲ್ಲ. ನನಗ್ನೆ ಸಾಕಷ್ಟು ಅನುಭವವಿದೆ. ನಾನು ಉತ್ತಮ ಪ್ರದರ್ಶನ ನೀಡಬೇಕಾಗಿತ್ತು. ಪ್ರಾಕ್ಟೀಸ್‌ನತ್ತ ಹೆಚ್ಚು ಗಮನ ನೀಡಿದ್ದೆ. ತೂಕ ಹೆಚ್ಚಿಸಿಕೊಳ್ಳಲು ಡಯಟ್ ಮಾಡಿದ್ದೆ. ಗೆಲುವು ಹಾಗೂ ಸೋಲು ಪಂದ್ಯದ ಭಾಗ. ಸೋತಾಗ ಅದರಿಂದ ಪಾಠ ಕಲಿಯಬೇಕು. ಎದುರಾಳಿ ಬಾಕ್ಸರ್ ತಪ್ಪು ಮಾಡಿದ್ದರೂ, ರೆಫರಿ ನನ್ನನ್ನು ಪ್ರಶ್ನಿಸಿದ್ದರು. ನನ್ನ ಸೋಲಿನಿಂದ ಪಾಠ ಕಲಿತ್ತಿದ್ದೇನೆ’’ ಎಂದು ದೀಪಕ್ ಪ್ರತಿಕ್ರಿಯಿಸಿದರು.

ಫೈನಲ್ ಪಂದ್ಯದಲ್ಲಿ ರೆಫರಿ ತೀರ್ಪಿನ ಬಗ್ಗೆ ಪ್ರಶ್ನೆ ಎತ್ತಿದ ಪಾಟೀಲ್, ಕಳೆದ ತಿಂಗಳು ರಶ್ಯಕ್ಕೆ ತೆರಳಿದಾಗ ರೆಫರಿಗಳ ತೀರ್ಪು ಉತ್ತಮವಾಗಿತ್ತು. ಈ ಬಾರಿ ರೆಫರಿ ನಿರ್ಧಾರ ನಮ್ಮ ಪರವಾಗಿರಲಿಲ್ಲ. ಇತರ ದೇಶದವರು ನಮ್ಮ ಬಾಕ್ಸರ್‌ನ್ನು ಶ್ಲಾಘಿಸಿದ್ದಾರೆ. ಎಲ್ಲರೂ ಕಠಿಣ ಶ್ರಮಪಟ್ಟಿದ್ದಾರೆ. ಕ್ರೀಡೆಯಲ್ಲಿ ಒಳ್ಳೆಯ ಜೊತೆಗೆ ಕೆಟ್ಟ ದಿನಗಳೂ ಇರುತ್ತವೆ ಎಂದರು.

 ‘‘ಎರಡನೇ ಸುತ್ತಿನಲ್ಲಿ ದೀಪಕ್ ಸ್ಪಷ್ಟವಾಗಿ ಗೆಲುವು ಪಡೆದಿದ್ದರು. ಆದರೆ, ರೆಫರಿ 5-0 ಸ್ಕೋರ್ ತೀರ್ಪು ನೀಡಿದರು. ರೆಫರಿ ಕಝಖ್‌ಸ್ತಾನಕ್ಕೆ ಗೆಲುವಿನ ಅಂಕ ನೀಡಿದ್ದಾರೆ. ಕಝಖ್‌ಸ್ತಾನ, ರಶ್ಯ ಹಾಗೂ ಉಝ್ಬೇಕಿಸ್ತಾನದ ಆಟಗಾರರು ಬಾಕ್ಸಿಂಗ್‌ನಲ್ಲಿ ಉತ್ತಮರಿದ್ದಾರೆಂಬ ಭಾವನೆ ಅವರಲ್ಲಿದೆ. ನಮ್ಮ ಇಡೀ ವರ್ಷದ ಕಠಿಣ ಶ್ರಮ ವ್ಯರ್ಥವಾಗಿದೆ. ನಮಗೆ ಕನಿಷ್ಠ 4-5 ಪದಕಗಳನ್ನು ಗೆಲ್ಲುವ ಭರವಸೆ ಇತ್ತು. ಆದರೆ, ಕೇವಲ 2 ಪದಕ ಗೆಲ್ಲಲು ಸಾಧ್ಯವಾಗಿದೆ. ಫೈನಲ್‌ನಲ್ಲಿ ಏಕಪಕ್ಷೀಯ ಫಲಿತಾಂಶ ನ್ಯಾಯಸಮ್ಮತವಲ್ಲ. ಮುಂಬರುವ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ವಿಶ್ವಾಸದಲ್ಲಿದ್ದೇವೆ. ರೆಫರಿ ತೀರ್ಪಿನ ಬಳಿಕ ದೀಪಕ್ ತುಂಬಾ ನೊಂದುಕೊಂಡರು’’ ಎಂದು ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News