×
Ad

ಪಾಕಿಸ್ತಾನ ವಿರುದ್ಧ ಡೇವಿಸ್ ಕಪ್: ಲಿಯಾಂಡರ್ ಪೇಸ್ ಆಡುವ ಸಾಧ್ಯತೆ

Update: 2019-10-26 23:33 IST

ಹೊಸದಿಲ್ಲಿ, ಅ.26: ಆಟವಾಡದ ನಾಯಕ ಮಹೇಶ್ ಭೂಪತಿ ಹಾಗೂ ಪ್ರಮುಖ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಭದ್ರತೆಯ ಭೀತಿಯಿಂದಾಗಿ ಇಸ್ಲಾಮಾಬಾದ್‌ಗೆ ಪ್ರಯಾಣಿಸಲು ಹಿಂದೇಟು ಹಾಕಿರುವ ಹಿನ್ನೆಲೆಯಲ್ಲಿ ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ)ಹಳೆ ಹುಲಿ ಲಿಯಾಂಡರ್ ಪೇಸ್ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ಡೇವಿಸ್‌ಕಪ್ ಏಶ್ಯ-ಒಸಿಯಾನಿಯಾ ಗ್ರೂಪ್-1 ಪಂದ್ಯ ನವೆಂಬರ್ 29-30ರಂದು ಇಸ್ಲಾಮಾಬಾದ್‌ನ ಹುಲ್ಲುಹಾಸಿನ ಅಂಗಳದಲ್ಲಿ ನಡೆಯಲಿದೆ. ಡೇವಿಸ್ ಕಪ್ ಪಂದ್ಯವನ್ನು ಪಾಕ್‌ನಿಂದ ಹೊರಗೆ ತಟಸ್ಥ ತಾಣಕ್ಕೆ ಸ್ಥಳಾಂತರಿಸುವಂತೆ ಎಐಟಿಎ, ಅಂತರ್‌ರಾಷ್ಟ್ರೀಯ ಟೆನಿಸ್ ಒಕ್ಕೂಟಕ್ಕೆ(ಐಟಿಎಫ್)ವಿನಂತಿಸಿಕೊಂಡಿತ್ತು. ಐಟಿಎಫ್ ಈ ಕುರಿತಂತೆ ನ.4ರಂದು ತನ್ನ ಅಂತಿಮ ನಿರ್ಧಾರ ಪ್ರಕಟಿಸಲಿದೆ.

ವೀಸಾ ಪ್ರಕ್ರಿಯೆ ನಡೆಸಲು ಪಾಕಿಸ್ತಾನ ಟೆನಿಸ್ ಒಕ್ಕೂಟಕ್ಕೆ(ಪಿಟಿಎಫ್)ಎಐಟಿಎ ಸಲ್ಲಿಸಿರುವ ಪಟ್ಟಿಯಲ್ಲಿ ಪೇಸ್ ಹೆಸರನ್ನು ಕಳುಹಿಸಿಕೊಟ್ಟಿದೆ. 46ರ ಹರೆಯದ ಪೇಸ್ ಡೇವಿಸ್ ಕಪ್ ಪಂದ್ಯದಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದರು. ಪೇಸ್ 2018ರ ಎಪ್ರಿಲ್‌ನಲ್ಲಿ ಕೊನೆಯ ಬಾರಿ ಡೇವಿಸ್ ಕಪ್ ಪಂದ್ಯದಲ್ಲಿ ಆಡಿದ್ದರು.

ಭಾರತ ಟೆನಿಸ್ ತಂಡದಲ್ಲಿರುವ ಇತರ ಆಟಗಾರರೆಂದರೆ: ಸಾಕೇತ್ ಮೈನೇನಿ, ಅರ್ಜುನ್ ಕಧೆ, ವಿಜಯ್ ಸುಂದರ್ ಪ್ರಶಾಂತ್, ಎನ್.ಶ್ರೀರಾಮ್ ಬಾಲಾಜಿ, ಸಿದ್ದಾರ್ಥ್ ರಾವತ್ ಹಾಗೂ ಮನೀಶ್ ಸುರೇಶ್ ಕುಮಾರ್.

ಕೋಚ್ ಸಯ್ಯದ್ ಝೀಶಾನ್ ಅಲಿ, ಮ್ಯಾನೇಜರ್ ಸುಂದರ್ ನಾರಾಯಣ ಐಯ್ಯರ್ ಹಾಗೂ ಫಿಸಿಯೊ ಆನಂದ್ ಕುಮಾರ್‌ರನ್ನು ಸಹಾಯಕ ಸಿಬ್ಬಂದಿಯಾಗಿ ನೇಮಿಸಲಾಗಿದೆ.

ಭೂಪತಿ ಹಾಗೂ ಬೋಪಣ್ಣರಲ್ಲದೆ ಪಾಕ್ ಪ್ರವಾಸಕ್ಕೆ ಹಿಂದೇಟು ಹಾಕಿರುವ ಆಟಗಾರರೆಂದರೆ: ಅಗ್ರ ಸಿಂಗಲ್ಸ್ ಆಟಗಾರ ರಾಮಕುಮಾರ್ ರಾಮನಾಥನ್, ಸುಮಿತ್ ನಗಾಲ್ ಹಾಗೂ ಸಸಿ ಕುಮಾರ್ ಮುಕುಂದ್.

 ಭಾರತದ ಶ್ರೇಷ್ಠ ರ್ಯಾಂಕಿನ ಸಿಂಗಲ್ಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಪಂದ್ಯಕ್ಕೆ ಲಭ್ಯವಿಲ್ಲ. ಪಂದ್ಯದ ಮೊದಲ ದಿನವಾದ ನ.29ರಂದು ಪ್ರಜ್ಞೇಶ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಪೇಸ್ ಡಬಲ್ಸ್ ಆಟಗಾರನಾಗಿ ಕಣಕ್ಕಿಳಿಯುವ ಜೊತೆಗೆ ಭೂಪತಿ ಅನುಪಸ್ಥಿತಿಯಲ್ಲಿ ನಾಯಕನ ಜವಾಬ್ದಾರಿಯನ್ನೂ ವಹಿಸಿಕೊಳ್ಳಲಿದ್ದಾರೆಂದು ತಿಳಿದುಬಂದಿದೆ.

ನ.4ರಂದು ಐಟಿಎಫ್ ನಿರ್ಧಾರ ಹೊರಬಂದ ಬಳಿಕವಷ್ಟೇ ಆಟಗಾರರ ಪ್ರವೇಶಕ್ಕೆ ಸಂಬಂಧಿಸಿ ನಿರ್ಧಾರಕೈಗೊಳ್ಳಲಾಗುವುದು ಎಂದು ಎಐಟಿಎ ಕಾರ್ಯದರ್ಶಿ ಹೀರೊನ್ಮಯ್ ಚಟರ್ಜಿ ತಿಳಿಸಿದ್ದಾರೆ.

ಒಂದು ವೇಳೆ ಐಟಿಎಫ್, ಎಐಟಿಎ ಬೇಡಿಕೆಯ ಮೇರೆಗೆ ಪಂದ್ಯವನ್ನು ಇಸ್ಲಾಮಾಬಾದ್‌ನಿಂದ ತಟಸ್ಥ ತಾಣಕ್ಕೆ ಸ್ಥಳಾಂತರಗೊಳಿಸಿದರೆ,ಭೂಪತಿ ಹಾಗೂ ಬೋಪಣ್ಣರ ಜೊತೆಗೆ ಇತರ ಸಿಂಗಲ್ಸ್ ಆಟಗಾರರು ಆಟಗಾರರ ಪಟ್ಟಿಗೆ ಮರು ಸೇರ್ಪಡೆಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News