​ಗೋಶಾಲೆಗಳಲ್ಲಿ ದೀಪೋತ್ಸವಕ್ಕೆ ಉತ್ತರ ಪ್ರದೇಶ ಸರ್ಕಾರ ಆದೇಶ

Update: 2019-10-27 04:04 GMT

ಲಕ್ನೋ: ಸರಯೂ ನದಿ ತೀರದಲ್ಲಿ 4.10 ಲಕ್ಷ ದೀಪಗಳನ್ನು ಹಚ್ಚುವ ಮೂಲಕ ಗಿನಿಸ್ ದಾಖಲೆ ಸ್ಥಾಪಿಸಲು ಸಿದ್ಧತೆ ನಡೆದಿರುವ ಮಧ್ಯೆಯೇ, ರಾಜ್ಯದ ಎಲ್ಲ ಗೋಶಾಲೆಗಳಲ್ಲಿ ಇಂಥದ್ದೇ ದೀಪೋತ್ಸವ ಹಮ್ಮಿಕೊಳ್ಳುವಂತೆ ಉತ್ತರ ಪ್ರದೇಶದ ಗೋಸೇವಾ ಆಯೋಗ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.

ಆಯೋಗದ ಆದೇಶದ ಹಿನ್ನೆಲೆಯಲ್ಲಿ ಗೋಶಾಲೆಗಳಲ್ಲಿ ನಡೆಸುವ ದೀಪೋತ್ಸವದ ಬಗ್ಗೆ ವೀಡಿಯೊ ದಾಖಲೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

"ಗೋವುಗಳನ್ನು ದೀಪಾವಳಿ ಬಳಿಕ ಪೂಜಿಸಲಾಗುತ್ತದೆ. ಆದ್ದರಿಂದ ಗೋಶಾಲೆಗಳಲ್ಲಿ ದೀಪೋತ್ಸವ ಆಚರಿಸುವುದರಲ್ಲಿ ತಪ್ಪೇನೂ ಇಲ್ಲ" ಎಂದು ಗೋಸೇವಾ ಆಯೋಗದ ಅಧ್ಯಕ್ಷ ಶ್ಯಾಮ್‌ನಂದನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ನೂರಾರು ಗೋಶಾಲೆಗಳು ಇರುವ ಹಿನ್ನೆಲೆಯಲ್ಲಿ ಅಯೋಗದ ಸೂಚನೆಯಿಂದ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ಲಕ್ಷಾಂತರ ಹಣತೆಗಳ ಖರೀದಿಗೆ ಹಾಗೂ ನೂರಾರು ಲೀಟರ್ ಸಾಸಿವೆ ಎಣ್ಣೆಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿಸಲು ಇಷ್ಟೊಂದು ಅಲ್ಪಾವಧಿಯಲ್ಲಿ ಸಂಪನ್ಮೂಲ ಎಲ್ಲಿಂದ ಕ್ರೋಢೀಕರಿಸಬೇಕು ಎನ್ನುವುದು ಅಧಿಕಾರಿಗಳ ಚಿಂತೆ.

ಆಯೋಗದ ನಿರ್ದೇಶನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಗೋ ದೀಪಾವಳಿಗೆ ಅಗತ್ಯ ಪರಿಕರಗಳನ್ನು ಒದಗಿಸಿಕೊಡುವ ಅನಿವಾರ್ಯತೆಗೆ ಸಿಲುಕಿ ಕೊಂಡಿದೆ. ಮೇವು ಖರೀದಿಗೇ ಹಣಕಾಸು ಮುಗ್ಗಟ್ಟು ಇರುವ ಹಿನ್ನೆಲೆಯಲ್ಲಿ, ಹಣತೆ ಮತ್ತು ಎಣ್ಣೆ ಖರೀದಿಗೆ ವೆಚ್ಚ ಮಾಡಬೇಕಾಗಿರುವುದು ಹೊರೆಯಾಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಗೋಶಾಲೆಗಳ ಕಳಪೆ ನಿರ್ವಹಣೆ, ಮೇವು ಖರೀದಿಯಲ್ಲಿ ಹಣ ದುರುಪಯೋಗ ಹಾಗೂ ಕರ್ತವ್ಯಲೋಪ ಆರೋಪದಲ್ಲಿ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಮಹಾರಾಜ್‌ಗಂಜ್ ಜಿಲ್ಲಾಧಿಕಾರಿ ಎನ್.ಕೆ.ಉಪಾಧ್ಯಾಯ ಅವರನ್ನು ಅಮಾನತು ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News