ಅಪಾಯದಲ್ಲಿ ಸಿಲುಕಿದ 2 ಬೋಟುಗಳು, 11 ಮೀನುಗಾರರ ರಕ್ಷಣೆ: ಓರ್ವ ನಾಪತ್ತೆ

Update: 2019-10-28 17:11 GMT

ಮಲ್ಪೆ, ಅ.28: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿ ಗೋವಾ ವಾಸ್ಕೋ ಸಮುದ್ರದಲ್ಲಿ ಸಂಪರ್ಕ ಕಡಿದುಕೊಂಡಿದ್ದ ಎರಡು ಬೋಟುಗಳಲ್ಲಿದ್ದ 12 ಮಂದಿಯ ಪೈಕಿ 11 ಮೀನುಗಾರರನ್ನು ಕೋಸ್ಟ್ ಗಾರ್ಡ್ ರಕ್ಷಿಸಿದ್ದು, ಅದರಲ್ಲಿ ಓರ್ವ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಮಲ್ಪೆಯ ಮಿಥುನ್ ಕುಮಾರ್ ಎಂಬವರ ಗಂಗಾ ಗಣೇಶ್ ಮತ್ತು ಸಂತೋಷ್ ಕುಮಾರ್ ಎಂಬವರ ಸುವರ್ಣ ಜ್ಯೋತಿ ಎಂಬ ಆಳ ಸಮುದ್ರ ಮೀನುಗಾರಿಕಾ ಬೋಟುಗಳು ಅ.19ರಂದು ಮೀನುಗಾರಿಕೆಗೆ ತೆರಳಿತ್ತು. ಸಮುದ್ರ ಮಧ್ಯೆ ಉಂಟಾಗಿರುವ ಭಾರೀ ಗಾಳಿಯಿಂದಾಗಿ ಈ ಎರಡು ಬೋಟುಗಳು ಅ.24ರಂದು ವಾಸ್ಕೋ ಬಳಿ ಸಂಪರ್ಕ ಕಳೆದುಕೊಂಡಿತ್ತೆನ್ನ ಲಾಗಿದೆ.

ಈ ಬಗ್ಗೆ ಮಲ್ಪೆ ಕರಾವಳಿ ಪಡೆಯವರು ನೀಡಿದ ಮಾಹಿತಿಯಂತೆ ಗೋವಾ ಕೋಸ್ಟ್ ಗಾರ್ಡ್‌ನವರ ಶಿಪ್‌ಗಳು ನಾಪತ್ತೆಯಾದ ಬೋಟಿಗಾಗಿ ಅ.26ರಂದು ಕಾರ್ಯಾಚರಣೆಗೆ ಇಳಿದಿದ್ದವು. ಅ.27ರಂದು ಗಂಗಾ ಗಣೇಶ್ ಬೋಟು ಪತ್ತೆಯಾಗಿದ್ದು ಅದರಲ್ಲಿದ್ದ ಆರು ಮಂದಿಯನ್ನು ರಕ್ಷಿಸಲಾಗಿದೆ. ಅದೇ ರೀತಿ ಸುವರ್ಣ ಜ್ಯೋತಿ ಬೋಟು ಕೂಡ ಪತ್ತೆಯಾಗಿದ್ದು, ಅದರಲ್ಲಿದ್ದ ಆರು ಮಂದಿ ಯನ್ನು ರಕ್ಷಿಸುವ ವೇಳೆ ಒರಿಸ್ಸಾ ಮೂಲದ ಓರ್ವ ಮೀನುಗಾರ ಭಯದಿಂದ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಎನ್ನಲಾಗಿದೆ.

ಆತನಿಗಾಗಿ ತೀವ್ರ ಹುಡುಕಾಟ ನಡೆಸಿದರೂ ಈವರೆಗೆ ಪತ್ತೆಯಾಗಿಲ್ಲ. ರಕ್ಷಣೆ ಮಾಡಿರುವ ಎಲ್ಲ 11 ಮೀನುಗಾರರನ್ನು ಗೋವಾಕ್ಕೆ ಕರೆತರಲಾಗಿದೆ. ಬೋಟಿನ ಮಾಲಕರು ಗೋವಾಕ್ಕೆ ತೆರಳಿರುವ ಬಗ್ಗೆ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News