ಸ್ವರ್ಣಜ್ಯೋತಿ ಬೋಟಿನಿಂದ ನಾಪತ್ತೆಯಾದ ಮೀನುಗಾರನಿಗೆ ಹುಡುಕಾಟ

Update: 2019-10-29 16:46 GMT

ಮಲ್ಪೆ, ಅ.29: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿ ಗೋವಾ ವಾಸ್ಕೋ ಸಮುದ್ರ ಮಧ್ಯೆ ಅಪಾಯದಲ್ಲಿ ಸಿಲುಕಿಕೊಂಡಿದ್ದ ಎರಡು ಬೋಟುಗಳ ಪೈಕಿ ಸ್ವರ್ಣಜ್ಯೋತಿ ಬೋಟಿನಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ಒರಿಸ್ಸಾ ಮೂಲದ ಚೋಟು ಎಂಬವರು ಈವರೆಗೆ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಮಿಥುನ್ ಕುಮಾರ್ ಮಾಲಕತ್ವದ ಗಂಗಾ ಗಣೇಶ್ ಬೋಟಿನಲ್ಲಿ ಆರು ಮಂದಿ ಮತ್ತು ಸಂತೋಷ್ ಕುಂದರ್ ಮಾಲಕತ್ವದ ಸ್ವರ್ಣಜ್ಯೋತಿ ಬೋಟಿನಲ್ಲಿ ಐವರು ಅ.24ರಂದು ಬೆಳಗಿನ ಜಾವ ಗೋವಾದ ವಾಸ್ಕೋದ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಬೋಟು ಅಪಾಯಕ್ಕೆ ಸಿಲುಕಿಕೊಂಡಿತ್ತು. ಈ ಬಗ್ಗೆ ಮಾಹಿತಿ ತಿಳಿದು ಅ.26ರಂದು ಸಂಜೆ ವೇಳೆ ಕೊಚ್ಚಿಗೆ ಹೊರಟಿದ್ದ ವಾಣಿಜ್ಯ ಬೋಟು ಹರಿಹರಧನ್, ಮೀನುಗಾರರ ರಕ್ಷಣೆಗೆ ಬಂದಿದ್ದು, ಈ ಸಂದರ್ಭ ಸ್ವರ್ಣಜ್ಯೋತಿ ಬೋಟಿನಲ್ಲಿದ್ದ ಒರಿಸ್ಸಾ ಮೂಲದ ಶಂಕರ್ ಎಂಬಾತನಿಗೆ ಆರೋಗ್ಯದ ಸಮಸ್ಯೆ ಇದ್ದ ಕಾರಣ ಅವನನ್ನು ಮೊದಲು ರಕ್ಷಿಸಲು ಹರಿಹರಧನ್ ಬೋಟಿನವರು ೈಫ್ ಜ್ಯಾಕೆಟನ್ನು ನೀರಿಗೆ ಎಸೆದರು.

ಈ ವೇಳೆ ಶಂಕರ್ ಜೊತೆಯಲ್ಲೇ ಇದ್ದ ಚೋಟು ಲೈಫ್ ಜ್ಯಾಕೇಟ್ ಪಡೆಯಲು ನೀರಿಗೆ ಹಾರಿದ ಪರಿಣಾಮ ನೀರಿನಲ್ಲಿ ಮುಳುಗಿ ನಾಪತ್ತೆ ಯಾದರು. ಈ ಬಗ್ಗೆ ಹರಿಹರಧನ್ ಬೋಟಿನವರು ಕೋಸ್ಟ್‌ಗಾರ್ಡ್ ನವರಿಗೆ ಮಾಹಿತಿ ನೀಡಿದ್ದು, ಅದೇ ದಿನ ರಾತ್ರಿ 9:30ರ ಸುಮಾರಿಗೆ ಕೋಸ್ಟ್ ಗಾರ್ಡ್ ನವರು ಸ್ಥಳಕ್ಕೆ ಬಂದರೆನ್ನಲಾಗಿದೆ. ಬಳಿಕ ಅನಾರೋಗ್ಯ ಪೀಡಿತ ಶಂಕರನನ್ನು ಚಿಕಿತ್ಸೆಗಾಗಿ ಕೊಚ್ಚಿಗೆ ಹರಿಹರಧನ್ ಬೋಟಿನಲ್ಲಿ ಕಳುಹಿಸಿಕೊಡಲಾಯಿತು.

ಇನ್ನುಳಿದ ಭಟ್ಕಳ ಗದ್ದೆಬೈಲಿನ ಮಲ್ಲಿಕಾರ್ಜುನ್(42), ಹೊನ್ನಾವರ ಹಳದಿಪುರದ ಗಣಪತಿ(46), ಕುಮಟ ಹೊಳನಗದ್ದೆಯ ಹನುಮಂತ(56) ಎಂಬವರನ್ನು ಕೋಸ್ಟ್ ಗಾರ್ಡ್‌ನವರು ರಕ್ಷಿಸಿದರು. ನಂತರ ಕೋಸ್ಟ್ ಗಾರ್ಡ್ ಶಿಪ್‌ಗೆ ಅ.27ರಂದು ಸಂಜೆ ವೇಳೆ ಗಂಗಾ ಗಣೇಶ್ ಬೋಟು ದೊರೆತಿದ್ದು, ಅದರಲ್ಲಿದ್ದ ಭಟ್ಕಳದ ಪುರುಷೋತ್ತಮ್(38), ಕೊಪ್ಪಳ ಯಲಬುರ್ಗಾದ ಹನುಮಪ್ಪ (34), ಭಟ್ಕಳ ಹೆಬ್ಲೆಯ ಅನಂತ(43), ಮಧ್ಯಪ್ರದೇಶದ ಜಯಪ್ರಕಾಶ್(32), ಜಾರ್ಖಂಡ್‌ನ ಕೃಷ್ಣ ಗೌಡ್(23) ಎಂಬವರನ್ನು ರಕ್ಷಿಸಲಾಯಿತು.

ಕೋಸ್ಟ್ ಗಾರ್ಡ್‌ನವರು ಅ.28ರ ಬೆಳಗಿನ ಜಾವದವರೆಗೂ ನಾಪತ್ತೆಯಾದ ಚೋಟುಗಾಗಿ ಹುಡುಕಾಟ ನಡೆಸಿದ್ದರು. ಆದರೆ ಚೋಟು ಈವರೆಗೆ ಪತ್ತೆ ಯಾಗಿಲ್ಲ. ಉಳಿದವರನ್ನು ಅ.28ರಂದು ಮಧ್ಯಾಹ್ನ ಗೋವಾ ಕೋಸ್ಟ್ ಗಾರ್ಡ್ ಕಛೇರಿಗೆ ತಲುಪಿಸಿದ್ದು, ಅವರೆಲ್ಲ ತಮ್ಮ ತಮ್ಮ ಊರಿಗೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚಿಕಿತ್ಸೆಗಾಗಿ ಕೊಚ್ಚಿಗೆ ತೆರಳಿದ ಶಂಕರ್ ಇಂದು ಮಲ್ಪೆಗೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News