ದ.ಆಫ್ರಿಕಾ ಗೆಲುವಿನ ಪಥಕ್ಕೆ ಮರಳುವ ವಿಶ್ವಾಸವಿದೆ: ಹಾಶಿಮ್ ಅಮ್ಲ

Update: 2019-10-29 17:37 GMT

ಜೊಹಾನ್ಸ್‌ಬರ್ಗ್, ಅ.29: ಸೋಲು-ಗೆಲುವು ಆಟದಲ್ಲಿ ಸಾಮಾನ್ಯ. ಏರಿಳಿತ ಎಲ್ಲಾ ತಂಡಕ್ಕೂ ಅನ್ವಯಿಸುತ್ತದೆ. ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲುವಿನ ಪಥಕ್ಕೆ ಮರಳಬೇಕು. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಖಂಡಿತಾ ಗೆಲುವಿನ ಪಥಕ್ಕೆ ಮರಳಲಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಿವೃತ್ತ ಆಟಗಾರ ಹಾಶಿಮ್ ಅಮ್ಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಭಾರತದೆದುರು ನಡೆದಿದ್ದ ಸರಣಿಯಲ್ಲಿ ದ. ಆಫ್ರಿಕಾ ತಂಡದ ಕಳಪೆ ನಿರ್ವಹಣೆಯನ್ನು ಉಲ್ಲೇಖಿಸಿದ ಅವರು, ಈ ಸರಣಿಯಲ್ಲಿ ತಂಡದ ಪ್ರದರ್ಶನ ತುಂಬಾ ಕೆಟ್ಟದಾಗಿತ್ತು. ಯಾವುದೇ ಸರಣಿಯಿರಲಿ, ಪ್ರವಾಸೀ ತಂಡದೆದುರು ಆತಿಥೇಯರಿಗೆ ಸ್ವಲ್ಪ ಮಟ್ಟಿನ ಮೇಲುಗೈ ಇರುತ್ತದೆ. ಆದರೆ ಭಾರತದ ಸರಣಿಯಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರು ಯಾವುದೇ ಪ್ರತಿರೋಧ ತೋರದೆ ಶರಣಾಗಿರುವುದು ನಿರಾಶೆಯನ್ನುಂಟು ಮಾಡಿದೆ ಎಂದಿದ್ದಾರೆ.

ಭಾರತದೆದುರಿನ ಸರಣಿಯಂತೆ, ಒಂದು ಕೆಟ್ಟ ಸರಣಿಯ ಬಳಿಕ ತಂಡದ ವಿರುದ್ಧ ಎಲ್ಲೆಡೆಯಿಂದ ಟೀಕಾಸ್ತ್ರದ ಸುರಿಮಳೆಯಾಗುತ್ತದೆ. ತಂಡದ ವೈಫಲ್ಯಕ್ಕೆ ಕಾರಣವೇನು ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಸರಣಿ ಸೋತಾಗ ಆ ಸೋಲಿನ ಹೊಣೆಯನ್ನು ಹೊರಬೇಕಾಗುತ್ತದೆ. ನಾವು ಚೆನ್ನಾಗಿ ಆಡಿಲ್ಲ ಎಂದು ಹೇಳಬಹುದು. ಒಂದು ವೇಳೆ ಗೆದ್ದರೆ, ನಾವು ಉತ್ತಮ ಪ್ರದರ್ಶನ ನೀಡಿದ್ದು ಈ ಪ್ರದರ್ಶನವನ್ನು ಸುಧಾರಿಸಿಕೊಳ್ಳುವತ್ತ ಗಮನ ಹರಿಸುತ್ತೇವೆ ಎನ್ನಬಹುದು. ತಂಡದ ಪ್ರದರ್ಶನಕ್ಕೆ ಕಾರಣವನ್ನು ಪ್ರಮಾಣೀಕರಿಸುವುದು ಸುಲಭವಲ್ಲ. ಆದರೆ, ದಕ್ಷಿಣ ಆಫ್ರಿಕಾ ತಂಡ ಗೆಲುವಿನ ಪಥಕ್ಕೆ ಮರಳಲು ಹೆಚ್ಚಿನ ಸಮಯ ಬೇಕಿಲ್ಲ ಎಂಬ ವಿಶ್ವಾಸವಂತೂ ತಮ್ಮಲ್ಲಿದೆ ಎಂದು ಅಮ್ಲ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ಕೋಚ್ ಹುದ್ದೆಯಲ್ಲಿ ಆಸಕ್ತಿ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸದ ಅಮ್ಲ, ಭಾರತದ ಈಗಿನ ತಂಡ ಹಾಗೂ ಈ ಹಿಂದಿನ ತಂಡಗಳ ನಡುವೆ ಹೋಲಿಕೆ ಮಾಡುವುದು ಸರಿಯಲ್ಲ ಎಂದರು. ಸಚಿನ್, ದ್ರಾವಿಡ್, ಲಕ್ಷ್ಮಣ್, ಗಂಗುಲಿ, ಸೆಹ್ವಾಗ್ ಅವರಿದ್ದ ತಂಡದ ವಿರುದ್ಧದ ಸರಣಿಯಲ್ಲೂ ನಾನು ದಕ್ಷಿಣ ಆಫ್ರಿಕಾ ಪರ ಆಡಿದ್ದೇನೆ. ಅದು ಪ್ರತಿಭಾವಂತರ ತಂಡವಾಗಿತ್ತು. ಅನಿಲ್ ಕುಂಬ್ಳೆ, ಹರ್ಭಜನ್‌ರಂತಹ ಅದ್ಭುತ ಬೌಲರ್‌ಗಳಿದ್ದರು. ಈಗಿನ ವಿರಾಟ್ ಕೊಹ್ಲಿ ನಾಯಕತ್ವದ ತಂಡದ ವಿರುದ್ಧವೂ ಆಡಿದ್ದೇನೆ. ಈಗಿನ ಭಾರತ ತಂಡ ಉತ್ತಮವಾಗಿ ಆಡುತ್ತಿದ್ದು ಸಮತೋಲಿತ ತಂಡವಾಗಿದೆ. ವಿಶ್ವದ ಯಾವುದೇ ತಂಡವನ್ನು ಸೋಲಿಸಲು ಸಮರ್ಥವಾಗಿದೆ. ಆದರೆ ಯಾವುದೇ ತಂಡವನ್ನು ಇನ್ನೊಂದು ತಂಡದೊಂದಿಗೆ ಹೋಲಿಸಲಾಗದು ಎಂಬುದು ತನ್ನ ಅಭಿಪ್ರಾಯ ಎಂದರು. ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ಕಳಪೆ ಪ್ರದರ್ಶನದ ಬಳಿಕ 36 ವರ್ಷದ ಅಮ್ಲ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಇದೀಗ ಇಂಗ್ಲೆಂಡಿನಲ್ಲಿ ಸರ್ರೇ ತಂಡದ ಪರ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ನಿರೀಕ್ಷೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News