ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಪಿಂಕ್ ಚೆಂಡಿನ ಸಮಸ್ಯೆ

Update: 2019-10-29 17:43 GMT

ಹೊಸದಿಲ್ಲಿ, ಅ.29: ಭಾರತ- ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಒಂದು ಟೆಸ್ಟ್ ಪಂದ್ಯ ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ಹಗಲು ರಾತ್ರಿ ನಡೆಯುವ ಬಗ್ಗೆ ಚರ್ಚೆ ಆರಂಭವಾಗುತ್ತಿರುವಂತೆಯೇ, ಹಗಲು ರಾತ್ರಿಯ ಟೆಸ್ಟ್ ಪಂದ್ಯದಲ್ಲಿ ಬಳಸುವ ಗುಣಮಟ್ಟದ ಪಿಂಕ್ ಚೆಂಡು(ಗುಲಾಬಿ ಬಣ್ಣದ ಚೆಂಡು) ಪೂರೈಸುವುದು ಹೇಗೆ ಎಂಬ ಸಮಸ್ಯೆ ಬಿಸಿಸಿಐಗೆ ಎದುರಾಗಿದೆ.

ಹಗಲು ರಾತ್ರಿಯ ಟೆಸ್ಟ್ ಪಂದ್ಯದಲ್ಲಿ ಕೆಂಪು ಚೆಂಡಿನ ಬದಲು ಗುಲಾಬಿ ಬಣ್ಣದ ಚೆಂಡು ಬಳಸಲಾಗುತ್ತದೆ. ಆಟಗಾರರ ಅಭ್ಯಾಸಕ್ಕೆ ಮತ್ತು ಪಂದ್ಯ ನಡೆಯಲು ಕನಿಷ್ಠ 24 ಗುಲಾಬಿ ಬಣ್ಣದ ಚೆಂಡುಗಳ ಅಗತ್ಯವಿದೆ. ಜೊತೆಗೆ, ಕೆಲವೊಮ್ಮೆ ಚೆಂಡು ಬದಲಾಯಿಸುವ ಅಗತ್ಯಬರುತ್ತದೆ. ಆಗ ಅಷ್ಟೇ ಬಳಕೆಯಾದ ಚೆಂಡುಗಳನ್ನು ನೀಡಬೇಕಾಗುತ್ತದೆ.(ಚೆಂಡಿನ ಬಗ್ಗೆ ಆಟಗಾರರು ಆಕ್ಷೇಪಿಸಿದಾಗ ಚೆಂಡನ್ನು ಬದಲಾಯಿಸಲು ಅವಕಾಶವಿದೆ.

ಆದರೆ ಆಗ ಹೊಸ ಚೆಂಡನ್ನು ಒದಗಿಸುವಂತಿಲ್ಲ. ಬದಲಾಯಿಸಲಾಗುವ ಚೆಂಡಿನಷ್ಟೇ ಬಳಕೆಯಾಗಿರುವ ಮತ್ತೊಂದು ಚೆಂಡನ್ನು ಒದಗಿಸಬೇಕಾಗುತ್ತದೆ). ಇಂತಹ ಕೆಲವು ಸಮಸ್ಯೆಗಳಿವೆ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ. ಭಾರತದಲ್ಲಿ ಟೆಸ್ಟ್ ಪಂದ್ಯಗಳಿಗೆ ಎಸ್‌ಜಿ ಸಂಸ್ಥೆಯ ಚೆಂಡನ್ನು ಬಳಸಲಾಗುತ್ತಿದ್ದು, ಈ ಚೆಂಡುಗಳ ಕಳಪೆ ಗುಣಮಟ್ಟದ ಬಗ್ಗೆ ಹಲವಾರು ಬಾರಿ ದೂರು ಕೇಳಿಬಂದಿದೆ. 2016ರಲ್ಲಿ ಭಾರತದ ದೇಶೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊತ್ತ ಮೊದಲ ಬಾರಿಗೆ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಪ್ರಯೋಗಾತ್ಮಕ ನೆಲೆಯಲ್ಲಿ ಗುಲಾಬಿ ಬಣ್ಣದ ಚೆಂಡುಗಳನ್ನು ಬಳಕೆ ಮಾಡಲಾಗಿತ್ತು.

ಆದರೆ ಈ ಪ್ರಯೋಗ ವಿಫಲವಾಗಿತ್ತು. ಭಾರತ ಪಾಲ್ಗೊಳ್ಳುವ ಪ್ರಪ್ರಥಮ ಹಗಲು ರಾತ್ರಿ ಟೆಸ್ಟ್ ಪಂದ್ಯ, ಬಾಂಗ್ಲಾದೇಶದೆದುರು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನವೆಂಬರ್ 22ರಿಂದ ನಡೆಯುವ ಬಗ್ಗೆ ವಿಶ್ವಾಸವಿದೆ ಎಂದು ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗುಲಿ ಹೇಳಿದ್ದಾರೆ. ಬಾಂಗ್ಲಾದೇಶ ತಂಡ ಹಾಗೂ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇದಕ್ಕೆ ಒಪ್ಪುವ ವಿಶ್ವಾಸವಿದೆ. ಟೆಸ್ಟ್ ಕ್ರಿಕೆಟ್‌ನ ಬಗ್ಗೆ ಆಸಕ್ತಿ ಹೆಚ್ಚಬೇಕಿದ್ದರೆ ಇಂತಹ ನವೀನತೆಯ ಅಗತ್ಯವಿದೆ ಎಂದು ಗಂಗುಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News