ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ: ಪ್ರತಿಕ್ರಿಯೆ ಪಡೆಯಲು ಬಸ್‌ಗಳಲ್ಲಿ ಪ್ರಯಾಣಿಸಿದ ಕೇಜ್ರಿವಾಲ್

Update: 2019-10-30 13:55 GMT

ಹೊಸದಿಲ್ಲಿ, ಅ. 30: ದಿಲ್ಲಿ ಸರಕಾರದ ಉಚಿತ ಪ್ರಯಾಣದ ಯೋಜನೆಯ ಬಗ್ಗೆ ಮಹಿಳಾ ಪ್ರಯಾಣಿಕರಿಂದ ನೇರ ಪ್ರತಿಕ್ರಿಯೆ ಪಡೆಯಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸಿದರು.

ಬಳಿಕ ಹೊಸದಿಲ್ಲಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಆಪ್ ನೇತೃತ್ವದ ದಿಲ್ಲಿ ಸರಕಾರದ ಈ ಯೋಜನೆ ಮಹಿಳೆಯರು ಸಮಸ್ಯೆ ರಹಿತವಾಗಿ ಬಸ್ಸಿನಲ್ಲಿ ಪ್ರಯಾಣಿಸುವ ಸೌಲಭ್ಯ ನೀಡಲಿದೆ ಎಂದರು. ಕಾರ್ಯ ಪಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಶೇ. 11. ಈ ಯೋಜನೆ ಮಹಿಳೆಯರು ಸುಲಲಿತವಾಗಿ ಪ್ರಯಾಣಿಸಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಈ ಯೋಜನೆ ಜಾರಿಗೊಳಿಸಿರುವುದಕ್ಕೆ ಪ್ರತಿಪಕ್ಷ ಮಾಡುತ್ತಿರುವ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘‘ಇದನ್ನು ವಿಪಕ್ಷ ಟೀಕಿಸುತ್ತಿರುವುದು ವಿಷಾದದ ವಿಚಾರ. ಎಲ್ಲ ಉತ್ತಮ ಕಾರ್ಯಗಳನ್ನು ಪ್ರಶಂಸಿಸಬೇಕು’’ ಎಂದರು. ರಾಜ್ಯ ಸರಕಾರದ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆ ಚುನಾವಣಾ ತಂತ್ರ ಎಂದು ಬಿಜೆಪಿಯ ದಿಲ್ಲಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಮಂಗಳವಾರ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಅಪಹಾಸ್ಯ ಮಾಡಿದ್ದರು.

ಬಸ್ ನಿರ್ವಾಹಕರು ನೀಡುವ ಏಕ ಪ್ರಯಾಣ ಉಚಿತ ಪಾಸ್ ಆಧಾರದಲ್ಲಿ ಎಲ್ಲ ಡಿಟಿಸಿ ಹಾಗೂ ಕ್ಲಸ್ಟರ್ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂದು ಆಪ್ ಸರಕಾರ ಸೋಮವಾರ ಅಧಿಸೂಚನೆ ನೀಡಿತ್ತು. ಹೊಸದಿಲ್ಲಿಯಲ್ಲಿ ಸಂಚರಿಸುವ ಬಸ್ಸುಗಳಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಲು 13,000ಕ್ಕೂ ಅಧಿಕ ಮಾರ್ಷಲ್‌ಗಳನ್ನು ನೇಮಿಸಲಾಗುವುದು ಎಂದು ಕೂಡ ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News