ಉ.ಪ್ರದೇಶ: ಕಸ್ಟಡಿ ಸಾವು ಆರೋಪ; ಪೊಲೀಸರ ವಿರುದ್ಧ ಪ್ರಕರಣ ದಾಖಲು

Update: 2019-10-30 14:12 GMT

ಲಕ್ನೊ, ಅ.30: ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿದ್ದ ವ್ಯಕ್ತಿಯೊಬ್ಬ ಪೊಲೀಸ್ ವಿಚಾರಣೆ ಸಂದರ್ಭ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಗುರುತಿಸದ ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಅಮೇಥಿ ಜಿಲ್ಲೆಯ ವ್ಯಾಪಾರಿ ಸತ್ಯಪ್ರಸಾದ್ ಶುಕ್ಲ ಪೊಲೀಸರ ಚಿತ್ರಹಿಂಸೆಯಿಂದ ಮೃತಪಟ್ಟಿರುವುದಾಗಿ ಆತನ ಕುಟುಂಬದವರು ಆರೋಪಿಸಿ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಸಿಟಿ ಕೊತ್ವಾಲಿ ಪೊಲೀಸ್ ಠಾಣೆಯ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಕ್ಟೋಬರ್ 5ರಂದು ಬ್ಯಾಂಕ್ ಒಂದರ 26 ಲಕ್ಷ ರೂ.ಹಣವನ್ನು ವ್ಯಾನ್‌ನಲ್ಲಿ ರವಾನಿಸುತ್ತಿದ್ದಾಗ ಅಮೇಥಿಯ ಪೀಪರ್‌ಪುರ ಎಂಬಲ್ಲಿ ವ್ಯಾನನ್ನು ತಡೆದು ನಿಲ್ಲಿಸಿ ಹಣವನ್ನು ಲೂಟಿ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿ ಶುಕ್ಲ ಮತ್ತಾತನ ಪುತ್ರನನ್ನು ವಿಚಾರಣೆಗೆಂದು ಠಾಣೆಗೆ ತರಲಾಗಿತ್ತು.

 ಈ ಮಧ್ಯೆ, ಕಸ್ಟಡಿಗೆ ತರುವ ಮೊದಲೇ ಶುಕ್ಲ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರ ಚಿತ್ರಹಿಂಸೆ ತಡೆಯದೆ ತಂದೆ ವಿಷ ಸೇವಿಸಿದ್ದಾರೆ ಎಂದು ಶುಕ್ಲನ ಪುತ್ರ ಆರೋಪಿಸಿದ್ದು ಕುಟುಂಬದವರು ಹಾಗೂ ಸ್ಥಳೀಯರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಆದರೆ ಚಿತ್ರಹಿಂಸೆಯಿಂದ ಶುಕ್ಲ ಮೃತಪಟ್ಟಿದ್ದಾನೆ ಎಂಬ ಆರೋಪವನ್ನು ಪೊಲೀಸ್ ಅಧೀಕ್ಷಕ ಖ್ಯಾತಿ ಗರ್ಗ್ ನಿರಾಕರಿಸಿದ್ದಾರೆ.

ಶುಕ್ಲನ ವಿರುದ್ಧದ ಆರೋಪಕ್ಕೆ ಸಾಕಷ್ಟು ಪುರಾವೆ ಲಭಿಸಿದ್ದರಿಂದಲೇ ಆತನನ್ನು ಬಂಧಿಸಲಾಗಿದೆ. ಬ್ಯಾಂಕ್‌ನಿಂದ ಹಣ ವರ್ಗಾವಣೆಯಾಗುತ್ತಿರುವ ಬಗ್ಗೆ ತನ್ನ ಸಹವರ್ತಿಗಳಿಗೆ ಆತ ಮಾಹಿತಿ ನೀಡಿರುವುದಕ್ಕೆ ಸಾಕ್ಷಿ ಇದೆ. ಆತ ಕುಖ್ಯಾತ ಕ್ರಿಮಿನಲ್ ಝಾಕಿರ್ ಆಲಿ ಅಲಿಯಾಸ್ ಗುಡ್ಡುವಿನ ಜೊತೆ ಸಂಪರ್ಕದಲ್ಲಿದ್ದಾನೆ. ಶುಕ್ಲನನ್ನು ವಿಚಾರಣೆಗೆ ಕರೆತರಲೆಂದು ಪೊಲೀಸರು ಹೋದಾಗ ಆತ ಮನೆಯೊಳಗೆ ಓಡಿಹೋಗಿ ವಿಷ ಕುಡಿದಿದ್ದಾನೆ. ತಕ್ಷಣ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದವರು ಹೇಳಿದ್ದಾರೆ.

 ಪ್ರಕರಣದ ಬಗ್ಗೆ ತನಿಖೆ ನಡೆಸಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದ ಸಮಿತಿ ರಚಿಸಲಾಗಿದೆ. ತಪ್ಪಿತಸ್ತರೆಂದು ಕಂಡುಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖ್ಯಾತಿ ಗರ್ಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News