×
Ad

ಯೂರೋಪ್ ಸಂಸದರಿಗೆ ಪ್ರಧಾನಿಯನ್ನು ಭೇಟಿ ಮಾಡಿಸಿದ ಮದಿ ಶರ್ಮಾ ಎಂಬ ಮಹಿಳೆ ಯಾರು?: ಕಾಂಗ್ರೆಸ್ ಪ್ರಶ್ನೆ

Update: 2019-10-30 19:52 IST

 ಹೊಸದಿಲ್ಲಿ,ಅ.30: ಐರೋಪ್ಯ ಒಕ್ಕೂಟದ ಸಂಸದರ ಅನಧಿಕೃತ ನಿಯೋಗದ ಜಮ್ಮು-ಕಾಶ್ಮೀರ ಭೇಟಿಗೆ ಅವಕಾಶ ನೀಡಿದ್ದಕ್ಕಾಗಿ ನರೇಂದ್ರ ಮೋದಿ ಸರಕಾರದ ವಿರುದ್ಧ ಬುಧವಾರ ತೀವ್ರ ದಾಳಿಯನ್ನು ನಡೆಸಿರುವ ಕಾಂಗ್ರೆಸ್, ಕಾಶ್ಮೀರವು ಆಂತರಿಕ ವಿಷಯವಾಗಿದೆ ಎನ್ನುವ ದೇಶದ ನೀತಿಯನ್ನು ಉಲ್ಲಂಘಿಸುವ ಮತ್ತು ಅದರಿಂದ ವಿಮುಖಗೊಳ್ಳುವ ಮೂಲಕ ಸರಕಾರವು ಮಹಾಪಾಪವನ್ನೆಸಗಿದೆ ಎಂದು ಹೇಳಿದೆ.

 ನಿಯೋಗದ ಭೇಟಿಯು ಅಂತರರಾಷ್ಟ್ರೀಯ 'ಬಿಸಿನೆಸ್ ಬ್ರೋಕರ್ ' ಸಂಘಟಿಸಿರುವ ಬಿಜೆಪಿ ಸರಕಾರದ ಅಪಕ್ವ, ಕೆಟ್ಟ ಸಲಹೆಯ ಮತ್ತು ಕೆಟ್ಟ ಪರಿಕಲ್ಪನೆಯ ಪ್ರಚಾರ ತಂತ್ರವಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಅವರು, ಮದಿ ಶರ್ಮಾ ಎಂಬ ಮಹಿಳೆಯನ್ನು ಪ್ರಸ್ತಾಪಿಸಿ ಹೇಳಿದರು. ಮೋದಿಯವರೊಂದಿಗೆ 'ಪ್ರತಿಷ್ಠಿತ ವಿಐಪಿ ಭೇಟಿ ' ಮತ್ತು ಕಾಶ್ಮೀರ ಪ್ರವಾಸದ ಭರವಸೆಯೊಂದಿಗೆ ಶರ್ಮಾ ಐರೋಪ್ಯ ಒಕ್ಕೂಟದ ಸಂಸದರಿಗೆ ಪತ್ರವನ್ನು ಬರೆದಿದ್ದರು.

   ಇಂಗ್ಲೆಂಡಿನ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಸಂಸದ ಬಿಲ್ ನ್ಯೂಟನ್ ಡನ್ ಹೇಳಿರುವಂತೆ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ನಾನ್-ಅಲೈನ್ಡ್ ಸ್ಟಡೀಸ್ ನಿಯೋಗದ ಪ್ರವಾಸವನ್ನು ಆಯೋಜಿಸಿದೆ. ಅದು ತನ್ನನ್ನು ಅಲಿಪ್ತ ಚಳವಳಿಯ ಚಿಂತನ ಚಿಲುಮೆ ಎಂದು ಬಣ್ಣಿಸಿಕೊಳ್ಳುತ್ತಿದೆ. ದಿ ವಿಮೆನ್ಸ್ ಇಕನಾಮಿಕ್ ಆ್ಯಂಡ್ ಸೋಷಿಯಲ್ ಥಿಂಕ್ ಟ್ಯಾಂಕ್ ಕೂಡ ಪ್ರವಾಸವನ್ನು ಆಯೋಜಿಸುವಲ್ಲಿ ಭಾಗಿಯಾಗಿತ್ತು ಎನ್ನಲಾಗಿದೆ.

 ಕಾಶ್ಮೀರದಲ್ಲಿಯ ವಸ್ತುಸ್ಥಿತಿಯ ಮೌಲ್ಯಮಾಪನಕ್ಕೆ ಮೂರನೇ ಪಕ್ಷವನ್ನು,ಅದೂ ಅಪರಿಚಿತ ಚಿಂತನ ಚಿಲುಮೆಯ ಮೂಲಕ ತಂದು ಮೋದಿ ಸರಕಾರವು ಘೋರ ಅಪಚಾರವನ್ನೆಸಗಿದೆ. ತನ್ಮೂಲಕ ಜಮ್ಮು-ಕಾಶ್ಮೀರ ಕುರಿತು ಭಾರತದ ಸಾರ್ವಭೌಮ ಹಕ್ಕುಗಳನ್ನು ಬಹಿರಂಗವಾಗಿ ಅವಹೇಳನಗೊಳಿಸಿದೆ ಎಂದು ಸುರ್ಜೆವಾಲಾ ಹೇಳಿದರು.

 ಮದಿ ಶರ್ಮಾ ಯಾರು ಎನ್ನುವುದನ್ನು ವಿವರಿಸುವಂತೆ ಮೋದಿ ಅವರನ್ನು ಆಗ್ರಹಿಸಿದ ಸುರ್ಜೆವಾಲಾ,ಸರಕಾರವು ಆಕೆಗೆ ರಾಜತಾಂತ್ರಿಕತೆಯ ಹೊರಗುತ್ತಿಗೆಯನ್ನು ನೀಡಿದೆ ಎಂದು ಆರೋಪಿಸಿದರು. “ಬಿಜೆಪಿಗೂ ‘ದಿ ವಿಮೆನ್ಸ್ ಇಕನಾಮಿಕ್ ಆ್ಯಂಡ್ ಸೋಷಿಯಲ್ ಥಿಂಕ್ ಟ್ಯಾಂಕ್ ಮತ್ತು ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ನಾನ್-ಅಲೈನ್ಡ್ ಸ್ಟಡೀಸ್‌ಗೂ ಏನು ಸಂಬಂಧ?, ಮದಿ ಶರ್ಮಾ ಅವರು ಏಕೆ ಮತ್ತು ಯಾವ ಅಧಿಕಾರ ಸ್ಥಾನದಿಂದ ಭಾರತಕ್ಕೆ ಖಾಸಗಿ ಭೇಟಿ ನೀಡಿರುವ ಐರೋಪ್ಯ ಸಂಸದರ ನಿಯೋಗಕ್ಕೆ ಮೋದಿಯವರೊಂದಿಗೆ ಭೇಟಿಯನ್ನು ಏರ್ಪಡಿಸಿದ್ದರು?, ಸರಕಾರವೇಕೆ ನಿಯೋಗಕ್ಕೆ ಸೌಲಭ್ಯಗಳನ್ನೊದಗಿಸುತ್ತಿದೆ?, ನಿಯೋಗದ ಇಡೀ ಪ್ರವಾಸಕ್ಕೆ ಹಣವೆಲ್ಲಿಂದ ಬಂದಿದೆ? ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನೇಕೆ ಮೂಲೆಗುಂಪು ಮಾಡಲಾಗಿದೆ” ಎಂದು ಸುರ್ಜೆವಾಲಾ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News