ಅನಾರೋಗ್ಯದ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಕೋರಿ ದಿಲ್ಲಿ ಹೈಕೋರ್ಟ್‌ಗೆ ಚಿದಂಬರಂ ಅರ್ಜಿ

Update: 2019-10-30 14:23 GMT

ಹೊಸದಿಲ್ಲಿ,ಅ.30: ಅನಾರೋಗ್ಯದ ಹಿನ್ನೆಲೆಯಲ್ಲಿ ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಧ್ಯಂತರ ಜಾಮೀನು ನೀಡುವಂತೆ ಕೋರಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಬುಧವಾರ ದಿಲ್ಲಿ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಸೋಮವಾರ ಹೊಟ್ಟೆನೋವು ಎಂದು ದೂರಿಕೊಂಡಿದ್ದ ಚಿದಂಬರಂ ಅವರನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಮತ್ತು ಚಿಕಿತ್ಸೆಯ ಬಳಿಕ ಜಾರಿ ನಿರ್ದೇಶನಾಲಯ (ಈ.ಡಿ) ಕಚೇರಿಗೆ ಮರಳಿ ಕರೆತರಲಾಗಿತ್ತು.

 ಬುಧವಾರ ಚಿದಂಬರಂ ಪರ ಉಚ್ಚ ನ್ಯಾಯಾಲಯದಲ್ಲಿ ಹಾಜರಾಗಿದ್ದ ವಕೀಲ ಕಪಿಲ ಸಿಬಲ್ ಅವರು ಅರ್ಜಿಯನ್ನು ಪೀಠದ ಮುಂದೆ ಉಲ್ಲೇಖಿಸಿ ತುರ್ತು ವಿಚಾರಣೆಗೆ ಕೋರಿದರು. ಆದರೆ ನ್ಯಾಯಾಲಯವು ಗುರುವಾರ ಸೂಕ್ತ ಪೀಠವು ಅರ್ಜಿಯನ್ನು ಕೈಗೆತ್ತಿಕೊಳ್ಳುವುದು ಎಂದು ತಿಳಿಸಿತು.

ತನ್ನ ಆರೋಗ್ಯವು ತುಂಬ ನಾಜೂಕು ಸ್ಥಿತಿಯಲ್ಲಿದೆ ಮತ್ತು ತಾನೀಗಾಗಲೇ ಜೈಲಿನಲ್ಲಿ ಎರಡು ಬಾರಿ ಅನಾರೋಗ್ಯಕ್ಕೆ ತುತ್ತಾಗಿದ್ದೇನೆ. ಜೈಲಿನಲ್ಲಿ ಕಳೆದ ಎರಡು ತಿಂಗಳುಗಳಲ್ಲಿ ಐದು ಕೆ.ಜಿ.ತೂಕವನ್ನು ಕಳೆದುಕೊಂಡಿದ್ದೇನೆ. ಚಳಿಗಾಲವು ಸನ್ನಿಹಿತವಾಗುತ್ತಿರುವುದರಿಂದ ಮತ್ತು ಡೆಂಗ್ಯುನಂತಹ ಪ್ರಕರಣಗಳು ಹೆಚ್ಚುತ್ತಿರುವುದರಿಂದ ತನ್ನ ಆರೋಗ್ಯವು ಹೆಚ್ಚಿನ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ಚಿದಂಬರಂ ಅರ್ಜಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News