ಮಹಾರಾಷ್ಟ್ರ: ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಫಡ್ನವೀಸ್ ಆಯ್ಕೆ
ಮುಂಬೈ,ಅ.30: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಎರಡನೇ ಅವಧಿಗೆ ಬಿಜೆಪಿಯ ರಾಜ್ಯ ಶಾಸಕಾಂಗ ಪಕ್ಷದ ನಾಯಕರಾಗಿ ಬುಧವಾರ ಆಯ್ಕೆಯಾಗಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬೇರೆ ಯಾವುದೇ ನಾಯಕರ ಹೆಸರು ಪ್ರಸ್ತಾಪವಾಗಿರಲಿಲ್ಲ ಎಂದು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದರು.
ಅ.21ರಂದು ಮಹಾರಾಷ್ಟ್ರ ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿ 105 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಮೂಡಿಬಂದಿದೆ. ಮಿತ್ರಪಕ್ಷ ಶಿವಸೇನೆ 56 ಸ್ಥಾನಗಳನ್ನು ಗೆದ್ದಿದ್ದರೆ ಪ್ರತಿಪಕ್ಷ ಕಾಂಗ್ರೆಸ್‌ಗೆ 44 ಮತ್ತು ಎನ್‌ಸಿಪಿಗೆ 54 ಸ್ಥಾನಗಳು ಲಭಿಸಿವೆ.
ಬಿಜೆಪಿ ಮತ್ತು ಶಿವಸೇನೆ ಒಗ್ಗೂಡಿ ಸರಕಾರವನ್ನು ರಚಿಸಬಹುದಾದರೂ ಶಿವಸೇನೆ ಅಧಿಕಾರದ ಸಮಾನ ಹಂಚಿಕೆಗಾಗಿ ಪಟ್ಟು ಹಿಡಿದಿದೆ. ಮುಖ್ಯಮಂತ್ರಿ ಹುದ್ದೆ ಎರಡೂವರೆ ವರ್ಷ ಅವಧಿಗೆ ತನಗೆ ದೊರೆಯಬೇಕೆಂಬ ಶಿವಸೇನೆಯ ಬೇಡಿಕೆಯನ್ನು ಫಡ್ನವೀಸ್ ಮಂಗಳವಾರ ತಿರಸ್ಕರಿಸಿದ್ದಾರೆ. ಬಿಜೆಪಿಯು ಶಿವಸೇನೆಯೊಂದಿಗೆ ಸಮಾನ ಅಧಿಕಾರ ಹಂಚಿಕೆಯ ಭರವಸೆಯನ್ನು ನೀಡಿರಲಿಲ್ಲ ಮತ್ತು ಐದು ವರ್ಷಗಳ ಪೂರ್ಣ ಅವಧಿಗೆ ತಾನೇ ಮುಖ್ಯಮಂತ್ರಿ ಯಾಗಿರುತ್ತೇನೆ ಎಂದು ಅವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಶಿವಸೇನೆಯು ಬಿಜೆಪಿ ನಿಯೋಗದೊಂದಿಗಿನ ತನ್ನ ಮಾತುಕತೆಯನ್ನು ರದ್ದುಗೊಳಿಸಿತ್ತು.