ಆಕಾಶವಾಣಿಯ ಸರ್ದಾರ್ ಪಟೇಲ್ ಉಪನ್ಯಾಸದ ಬದಲು ಮೋದಿ-ಶಾ ಭಾಷಣ!

Update: 2019-10-30 15:38 GMT

ಹೊಸದಿಲ್ಲಿ,ಅ.30: ಆಕಾಶವಾಣಿಯು ಕಳೆದ 60 ವರ್ಷಗಳಿಂದಲೂ ಪ್ರತಿ ವರ್ಷದ ಅ.31ರಂದು ಸರ್ದಾರ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯಂದು ಅವರ ಹೆಸರಿನಲ್ಲಿ ಒಂದು ಗಂಟೆ ಅವಧಿಯ ಸ್ಮಾರಕ ಉಪನ್ಯಾಸವನ್ನು ಪ್ರಸಾರ ಮಾಡುತ್ತಿತ್ತು. ಆದರೆ ಈ ವರ್ಷ ಆಕಾಶವಾಣಿಯು ಈ ವಾಡಿಕೆಯನ್ನು ಬದಲಿಸಿದೆ ಎಂದು Theprint.in ವರದಿ ಮಾಡಿದೆ.

 ಆಕಾಶವಾಣಿಯು ಗಣ್ಯ ವ್ಯಕ್ತಿಯೋರ್ವರಿಂದ ಉಪನ್ಯಾಸದ ಬದಲು ಗುಜರಾತಿನ ಕೇವಡಿಯಾದಲ್ಲಿ ಮತ್ತು ಗೃಹಸಚಿವ ಅಮಿತ್ ಶಾ ಅವರು ದಿಲ್ಲಿಯಲ್ಲಿ ಮಾಡಿದ್ದ ಭಾಷಣಗಳ ಆಯ್ದ ಭಾಗಗಳನ್ನೊಳಗೊಂಡ ರೇಡಿಯೊ ವರದಿಯನ್ನು ಪ್ರಸಾರಿಸಲಿದೆ. ಪ್ರಧಾನಿಯವರ ಮನ್ ಕಿ ಬಾತ್ ಅಧ್ಯಾಯಗಳ ಆಯ್ದ ಭಾಗಗಳು,ಕಾರ್ಯಕ್ರಮಕ್ಕಾಗಿ ಸಿದ್ಧಗೊಳಿಸಿರುವ ಗೀತೆ ಮತ್ತು ಪಟೇಲ್ ಅವರ ಕೆಲವು ಲಭ್ಯ ಉಕ್ತಿಗಳೂ ವರದಿಯ ಭಾಗವಾಗಿರಲಿವೆ ಎಂದು ಸರಕಾರದ ಮೂಲವೊಂದು ತಿಳಿಸಿದೆ.

ಗಣ್ಯ ವ್ಯಕ್ತಿಯೋರ್ವರು ನೀಡುತ್ತಿದ್ದ ವಾರ್ಷಿಕ ಸರ್ದಾರ್ ಪಟೇಲ್ ಸ್ಮಾರಕ ಉಪನ್ಯಾಸವನ್ನು ಅಕ್ಟೋಬರ್ ಕೊನೆಯ ವಾರದಲ್ಲಿ ಧ್ವನಿಮುದ್ರಿಸಿಕೊಳ್ಳಲಾಗುತ್ತದೆ ಮತ್ತು ಅ.31ರಂದು ಅದನ್ನು ಪ್ರಸಾರ ಮಾಡಲಾಗುತ್ತದೆ. ಆದರ ಈ ಬಾರಿ ಇದನ್ನು ಕೈಬಿಡಲಾಗಿದೆ. ಇದಕ್ಕೆ ಯಾವುದೇ ಕಾರಣಗಳನ್ನು ನೀಡಲಾಗಿಲ್ಲ ಎಂದು ಮೂಲವು ತಿಳಿಸಿದರೆ,ಇದು ಕೊನೆಯ ಗಳಿಗೆಯ ನಿರ್ಧಾರವಾಗಿದೆ ಎಂದು ಇತರ ಮೂಲಗಳು ಹೇಳಿವೆ.

ಆದರೆ ಕಾರ್ಯಕ್ರಮಕ್ಕೆ ಸರ್ದಾರ್ ಪಟೇಲ್ ಸ್ಮಾರಕ ಉಪನ್ಯಾಸ ಎಂಬ ಹೆಸರನ್ನು ಉಳಿಸಿಕೊಳ್ಳಲು ಆಕಾಶವಾಣಿಯು ನಿರ್ಧರಿಸಿದೆ. ಕಾರ್ಯಕ್ರಮವು ಅ.31ರಂದು ರಾತ್ರಿ ದೇಶಾದ್ಯಂತ ಎಲ್ಲ ಆಕಾಶವಾಣಿ ಕೇಂದ್ರಗಳಿಂದ ಪ್ರಸಾರಗೊಳ್ಳಲಿದೆ.

ಕಾರ್ಯಕ್ರಮವನ್ನು ವಿಭಿನ್ನ ರೂಪದಲ್ಲಿ ಪ್ರಸಾರಿಸಲಾಗುತ್ತಿದೆ,ಅಷ್ಟೇ ಎಂದು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ಆಕಾಶವಾಣಿಯ ಮಹಾ ನಿರ್ದೇಶಕ ಫಯಾಝ್ ಶೆಹ್ರೆಯಾರ್ ಅವರು,ಮೋದಿ ಅವರು ಪಟೇಲ್ ಗೌರವಾರ್ಥ ಕೇವಡಿಯಾದಲ್ಲಿ ಮಾಡಿದ್ದ ಭಾಷಣ ಮತ್ತು ಇತ್ತೀಚಿಗೆ ಜಮ್ಮು-ಕಾಶ್ಮೀರದ ಪುನರ್‌ರಚನೆಯಲ್ಲಿ ಅಂತ್ಯಗೊಂಡ ಭಾರತದ ಪುನರ್‌ಘಟನೆಯಲ್ಲಿ ಮಾಜಿ ಗೃಹಸಚಿವ ಪಟೇಲ್ ಅವರ ಪಾತ್ರದ ಮೇಲೆ ಬೆಳಕು ಚೆಲ್ಲಿ ಶಾ ದಿಲ್ಲಿಯಲ್ಲಿ ಮಾಡಿದ್ದ ಭಾಷಣದ ಆಯ್ದ ಭಾಗಗಳನ್ನು ಪ್ರಸಾರಿಸಲಾಗುವುದು ಎಂದು ತಿಳಿಸಿದರು.

ಇಂಗ್ಲಿಷ್‌ನಲ್ಲಿ ಪಟೇಲ್ ಸ್ಮಾರಕ ಉಪನ್ಯಾಸ 1955ರಲ್ಲಿ ಆರಂಭಗೊಂಡಿತ್ತು. ಭಾರತದ ಮೊದಲ ವಾರ್ತಾ ಮತ್ತು ಪ್ರಸಾರ ಸಚಿವರಾಗಿದ್ದ ಪಟೇಲ್ ಉಪಪ್ರಧಾನಿ ಮತ್ತು ಗೃಹಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

  ಭಾರತದ ಕೊನೆಯ ಗವರ್ನರ್ ಜನರಲ್ ಡಾ.ಸಿ.ರಾಜಗೋಪಾಲಾಚಾರಿ,ಮಾಜಿ ರಾಷ್ಟ್ರಪತಿಗಳಾದ ಡಾ.ಝಾಕಿರ್ ಹುಸೇನ್ ಮತ್ತು ಡಾ.ಎಪಿಜೆ ಅಬ್ದುಲ್ ಕಲಾಂ,ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಮತ್ತಿತರ ಗಣ್ಯರು ಈ ಎಲ್ಲ ವರ್ಷಗಳಲ್ಲಿ ಪಟೇಲ್ ಸ್ಮಾರಕ ಉಪನ್ಯಾಸಗಳನ್ನು ನೀಡಿದ್ದರು. ಕಳೆದ ಐದು ವರ್ಷಗಳಲ್ಲಿ ಅರುಣ್ ಜೇಟ್ಲಿ, ಜಿತೇಂದ್ರ ಸಿಂಗ್ ಮತ್ತು ಸ್ಮೃತಿ ಇರಾನಿ ಸೇರಿದಂತೆ ಮೋದಿ ಸರಕಾರದ ಹಲವಾರು ಸಚಿವರು ಈ ಉಪನ್ಯಾಸಗಳನ್ನು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News