6 ವರ್ಷದ ಬಾಲಕಿ ಸೇರಿ 4 ಅಪ್ರಾಪ್ತರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ ಪೊಲೀಸರು!

Update: 2019-10-30 17:27 GMT

ವಿಜಯವಾಡ, ಅ.30: ನಾಲ್ಕು ಅಪ್ರಾಪ್ತರ ವಿರುದ್ಧ ವರದಕ್ಷಿಣ ಕಿರುಕುಳ ಪ್ರಕರಣ ದಾಖಲಿಸುವ ಮೂಲಕ ಗುಂಟೂರು ಪೊಲೀಸರು ಸುದ್ದಿಯಲ್ಲಿದ್ದಾರೆ. ಇಪ್ಪತ್ತಾರು ವರ್ಷದ ಪೊನ್ನೆಕಾಂತಿ ಬಿಂದು ಎಂಬ ಮಹಿಳೆ ತನ್ನ ಪತಿ ಅದರನ ಕುಮಾರ್ ಮತ್ತಾತನ ಕುಟುಂಬದ ನಾಲ್ಕು ಮಕ್ಕಳ ಸಹಿತ ಇತರ ಸದಸ್ಯರ ವಿರುದ್ಧ ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ದೂರನ್ನಾಧರಿಸಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಪ್ರಕರಣ ಎದುರಿಸುತ್ತಿರುವ ಮಕ್ಕಳ ಪೈಕಿ ಒಬ್ಬಾಕೆಗೆ ಆರು ವರ್ಷ, ಇನ್ನೊಬ್ಬಾಕೆಗೆ 9 ವರ್ಷ ಹಾಗೂ ಇನ್ನೂ ಇತರ ಇಬ್ಬರು 11 ವರ್ಷದ ಬಾಲಕರಾಗಿದ್ದಾರೆ.

ಮಕ್ಕಳ ಮೇಲೆ ಪ್ರಕರಣ ದಾಖಲಿಸಿರುವುದರಿಂದ ದಂಗಾಗಿರುವ ದೂರುದಾರೆಯ ಪತಿ ಅದರನ ಕುಮಾರ್ ಇದೀಗ ಆಂಧ್ರ ಪ್ರದೇಶ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು ಕ್ರಿಮಿನಲ್ ಪ್ರಕರಣ ರದ್ದುಗೊಳಿಸುವಂತೆ ಕೋರಿದ್ದಾರೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಇನ್ನಷ್ಟೇ ಕೈಗೆತ್ತಿಕೊಳ್ಳಬೇಕಿದೆ. ಪೊಲೀಸರು ವಾಸ್ತವವನ್ನು ಪರಿಶೀಲಿಸದೆಯೇ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಬಿಂದು ತನ್ನ ದೂರಿನಲ್ಲಿ ತಾನು ಅದರನ ಕುಮಾರ್‍ ನನ್ನು ನವೆಂಬರ್ 29, 2018ರಂದು ವಿವಾಹವಾಗಿದ್ದ ಸಂದರ್ಭ ತನ್ನ ಹೆತ್ತವರು ರೂ 3 ಲಕ್ಷ ವರದಕ್ಷಿಣೆ, ಚಿನ್ನ ಹಾಗೂ ರೂ 44,663  ಮೌಲ್ಯದ ಪೀಠೋಪಕರಣ ನೀಡಿದ್ದರು. ವಾಹವಾದ 25ನೇ ದಿನದಿಂದ ತನ್ನ ನಾಲ್ಕು ಮಂದಿ ನಾದಿನಿಯರು,  ಮೊದಲ ಮೂವರು ನಾದಿನಿಯರ ಪತಿಯಂದಿರು ಹಾಗೂ ಅವರ ಮಕ್ಕಳು ಕಿರುಕುಳ ನೀಡಲು ಆರಂಭಿಸಿದ್ದರೆಂದು ದೂರಿದ್ದಳು. ತನ್ನ ಮೊಬೈಲ್ ಫೋನ್ ಕೂಡ ಸೆಳೆಯಲಾಗಿತ್ತು ಹಾಗೂ ಹೆತ್ತವರಿಗೆ ಕರೆ ಮಾಡದಂತೆ ತಡೆಯಲಾಗಿತ್ತು ಎಂದೂ ಆಕೆ ಆರೋಪಿಸಿದ್ದಾಳೆ. ತನ್ನ ಪತಿ ಹೊಡೆಯುತ್ತಿದ್ದ ಹಾಗೂ ಆ ಮನೆಯಲ್ಲಿ ತನ್ನ ಜೀವಕ್ಕೆ ಅಪಾಯವಿದೆ ಎಂದೂ ದೂರಿನಲ್ಲಿ ಮಹಿಳೆ ಹೇಳಿದ್ದಳು.

ಆದರೆ ಆಕೆಯ ಆರೋಪಗಳಿಗೆ ಯಾವುದೇ ಪುರಾವೆಯಿಲ್ಲ, ಪೊಲೀಸರು ಅಪ್ರಾಪ್ತರ ವಿರುದ್ಧ ಪ್ರಕರಣ ದಾಖಲಿಸುವಾಗ ಕಾನೂನು ಪ್ರಕ್ರಿಯೆ ಅನುಸರಿಸಿಲ್ಲ ಎಂದು ಅದರನ ಕುಮಾರ್ ಹೈಕೋರ್ಟಿಗೆ ಸಲ್ಲಿಸಿದ ಅಪೀಲಿನಲ್ಲಿ ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News