ಚೀನಾ: ಜಗತ್ತಿನ ಅತಿ ದೊಡ್ಡ ಮೊಬೈಲ್ ಫೋನ್ ಜಾಲ ಅಸ್ತಿತ್ವಕ್ಕೆ
ಬೀಜಿಂಗ್, ಅ. 31: ಚೀನಾದ ಮೂರು ಸರಕಾರಿ ಒಡೆತನದ ವಯರ್‌ಲೆಸ್ ಕಂಪೆನಿಗಳು ಗುರುವಾರ 5ಜಿ ಮೊಬೈಲ್ ಫೋನ್ ಸೇವೆಗಳನ್ನು ಆರಂಭಿಸಿವೆ.
ಚೀನಾದ ಅತಿ ದೊಡ್ಡ ಟೆಲಿಕಾಂ ಕಂಪೆನಿ ಚೀನಾ ಮೊಬೈಲ್ ಲಿಮಿಟೆಡ್ ಬೀಜಿಂಗ್, ಶಾಂಘೈ ಮತ್ತು ಶೆಂಝನ್ ಸೇರಿದಂತೆ 50 ನಗರಗಳಲ್ಲಿ 5ಜಿ ಜಾಲವನ್ನು ಹರಡಿದೆ. ಅದು ತಿಂಗಳಿಗೆ 128 ಯುವಾನ್ (ಸುಮಾರು 1,277 ರೂಪಾಯಿ) ಬೆಲೆಯಲ್ಲಿ ತಿಂಗಳ ಪ್ಯಾಕೇಜ್‌ಗಳನ್ನು ನೀಡುತ್ತಿದೆ. ಅದರ ಪ್ರತಿಸ್ಪರ್ಧಿಗಳಾದ ಚೀನಾ ಟೆಲಿಕಾಮ್ ಕಾರ್ಪ್ ಮತ್ತು ಚೀನಾ ಯೂನಿಕಾಮ್ ಹಾಂಕಾಂಗ್ ಲಿಮಿಟೆಡ್ ಕೂಡ ಸ್ಪರ್ಧಾತ್ಮಕ ದರಗಳಲ್ಲಿ ಸೇವೆಯನ್ನು ಆರಂಭಿಸಿವೆ.
ಈ ಕಂಪೆನಿಗಳು 5ಜಿ ಜಾಲಗಳನ್ನು ಮುಂದಿನ ವರ್ಷ ಆರಂಭಿಸುವ ಯೋಜನೆಯನ್ನು ಹೊಂದಿದ್ದವು. ಆದರೆ, ಚೀನಾದ ಬೃಹತ್ ತಂತ್ರಜ್ಞಾನ ಕಂಪೆನಿ ಹಾಗೂ 5ಜಿ ಸಲಕರಣೆಗಳ ಪೂರೈಕೆದಾರ ವಾವೇ ಮೇಲೆ ಅಮೆರಿಕ ನಿಷೇಧ ಹೇರಿದ ಬಳಿಕ, ಚೀನಾದ ಕಂಪೆನಿಗಳು 5ಜಿ ಸೇವೆಗಳಿಗೆ ಮುಂಚಿತವಾಗಿಯೇ ಚಾಲನೆ ನೀಡಿವೆ.
ಅಮೆರಿಕದ ಕೆಲವು ಕಂಪೆನಿಗಳು ಈಗಾಗಲೇ ಕೆಲವು ನಗರಗಳ ಕೆಲವು ಭಾಗಗಳಿಗೆ 5ಜಿ ಜಾಲವನ್ನು ಪರಿಚಯಿಸಿದೆ ಹಾಗೂ ದಕ್ಷಿಣ ಕೊರಿಯ ತನ್ನ 5ಜಿ ಜಾಲವನ್ನು ಎಪ್ರಿಲ್‌ನಲ್ಲಿ ಜಾರಿಗೆ ತಂದಿದೆ. ಆದರೆ, ಚೀನಾವು ಅಗಾಧ ಜನಸಂಖ್ಯೆ ಮತ್ತು ಕಂಪೆನಿಗಳ ಹೂಡಿಕೆಗಳ ಬಲದಿಂದ ಶೀಘ್ರದಲ್ಲೇ ಜಗತ್ತಿನ ಅತಿ ದೊಡ್ಡ 5ಜಿ ಸಲಕರಣೆಗಳ ಪೂರೈಕೆ ಸಂಸ್ಥೆಯಾಗಲಿದೆ.
5ಜಿಯ ವೈಶಿಷ್ಟತೆಗಳೇನು?
1. 5ಜಿ ಜಾಲವು ಉತ್ತಮ ವ್ಯಾಪ್ತಿ (ಕವರೇಜ್) ಪ್ರದೇಶವನ್ನು ಹೊಂದಿರುತ್ತದೆ ಹಾಗೂ ಅದರ ದತ್ತಾಂಶ (ಡೇಟಾ) ವರ್ಗಾವಣೆ (ಡೌನ್‌ಲೋಡ್) ದರವು 4ಜಿ ಜಾಲಕ್ಕಿಂತ 10ಕ್ಕೂ ಅಧಿಕ ಪಟ್ಟು ಅಧಿಕವಾಗಿರುತ್ತದೆ.
2. 5ಜಿ ಜಾಲದಲ್ಲಿ ಸೆಕೆಂಡ್‌ಗೆ ಕನಿಷ್ಠ 1 ಜಿಬಿ ದತ್ತಾಂಶ ವರ್ಗಾವಣೆಯಾಗುತ್ತದೆ.
3. 5ಜಿ ಜಾಲವು ಕಡಿಮೆ ಬ್ಯಾಟರಿಯನ್ನು ಬಳಸುತ್ತದೆ.
4. ಈ ಜಾಲವು ಹೆಚ್ಚಿನ ಸುರಕ್ಷತೆಯನ್ನು ಖಾತರಿಪಡಿಸುತ್ತದೆ.
ಆದರೆ 5ಜಿ ಜಾಲವನ್ನು ಸ್ಥಾಪಿಸಲು ಅತ್ಯಧಿಕ ವೆಚ್ಚ ತಗಲುತ್ತದೆ ಹಾಗೂ ಈಗ ಇರುವ ಹೆಚ್ಚಿನ ಮೊಬೈಲ್ ಫೋನ್‌ಗಳು 5ಜಿ ತಂತ್ರಜ್ಞಾನಕ್ಕೆ ಅನುಗುಣವಾಗಿಲ್ಲ.