ಬಿರುಕುಗಳು ಪತ್ತೆ: 50 737ಎನ್‌ಜಿ ವಿಮಾನಗಳು ಸೇವೆಯಿಂದ ಹೊರಗೆ: ಬೋಯಿಂಗ್ ಘೋಷಣೆ
ಸಿಡ್ನಿ (ಆಸ್ಟ್ರೇಲಿಯ), ಅ. 31: ತನ್ನ ಜನಪ್ರಿಯ 737ಎನ್‌ಜಿ ಮಾದರಿಯ ವಿಮಾನಗಳಲ್ಲಿ ಬಿರುಕುಗಳು ಪತ್ತೆಯಾದ ಬಳಿಕ, ಈ ಮಾದರಿಯ 50ರಷ್ಟು ವಿಮಾನಗಳನ್ನು ಸೇವೆಯಿಂದ ಹೊರಗಿಡಲಾಗಿದೆ ಎಂದು ವಿಮಾನ ತಯಾರಕ ಕಂಪೆನಿ ಬೋಯಿಂಗ್ ಗುರುವಾರ ಘೋಷಿಸಿದೆ.
737 ಮ್ಯಾಕ್ಸ್ ಮಾದರಿಯ ಎರಡು ವಿಮಾನಗಳು ಪತನಗೊಂಡ ಬಳಿಕ ಆ ಮಾದರಿಯ ಎಲ್ಲ ವಿಮಾನಗಳನ್ನು ಸೇವೆಯಿಂದ ಹೊರಗಿಡಲಾಗಿತ್ತು. ಈಗ 737 ಎನ್‌ಜಿ ಮಾದರಿಯ ವಿಮಾನಗಳನ್ನು ಸೇವೆಯಿಂದ ಹೊರಗಿಟ್ಟಿರುವುದು ಅಮೆರಿಕದ ಕಂಪೆನಿ ಅನುಭವಿಸಿದ ಇನ್ನೊಂದು ಹೊಡೆತವಾಗಿದೆ.
ಆಸ್ಟ್ರೇಲಿಯದ ಸರಕಾರಿ ವಾಯುಯಾನ ಸಂಸ್ಥೆ ‘ಕಾಂಟಾಸ್’ನಿಂದ ಹೊಸದಾಗಿ ಈ ಮಾದರಿಯ ಒಂದು ವಿಮಾನವನ್ನು ಸೇವೆಯಿಂದ ಹೊರಗಿಡಲಾಗಿದೆ. ಇನ್ನುಳಿದ 32 ವಿಮಾನಗಳ ತಪಾಸಣೆಯನ್ನು ತುರ್ತಾಗಿ ಮಾಡುವುದಾಗಿ ಅದು ಹೇಳಿದೆ, ಆದರೆ, ಪ್ರಯಾಣಿಕರು ಹೆದರಬೇಕಾದ ಅಗತ್ಯವಿಲ್ಲ ಎಂದಿದೆ.
ದಕ್ಷಿಣ ಕೊರಿಯದಲ್ಲಿ ಅಕ್ಟೋಬರ್ ತಿಂಗಳ ಆದಿ ಭಾಗದಲ್ಲಿ 9 737 ಎನ್‌ಜಿ ವಿಮಾನಗಳನ್ನು ಸೇವೆಯಿಂದ ಹೊರಗಿಡಲಾಗಿತ್ತು.
ವಿಮಾನದ ರೆಕ್ಕೆಗಳನ್ನು ಪ್ರಧಾನ ದೇಹಕ್ಕೆ ಜೋಡಿಸುವ ‘ಪಿಕಲ್ ಫೋರ್ಕ್’ ಎಂಬ ಭಾಗದಲ್ಲಿ ಸಮಸ್ಯೆಯಿರುವುದಾಗಿ ಬೋಯಿಂಗ್ ಈಗಾಗಲೇ ಘೋಷಿಸಿದೆ.