ಹೋರಾಟಗಾರರ ಮೇಲೆ ‘ಸ್ಪೈವೇರ್’ ಬೇಹುಗಾರಿಕೆ: ವಾಟ್ಸ್‌ಆ್ಯಪ್ ನಿಂದ ವಿವರಣೆ ಕೇಳಿದ ಕೇಂದ್ರ ಸರಕಾರ

Update: 2019-10-31 17:07 GMT

ಹೊಸದಿಲ್ಲಿ, ಅ.31: ವಾಟ್ಸ್‌ಆ್ಯಪ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ನುಸುಳಿದ್ದ ಗುಪ್ತಚರ ತಂತ್ರಾಂಶದ ಕುರಿತು ವಿವರಣೆಯನ್ನು ನ.4ರೊಳಗೆ ನೀಡುವಂತೆ ಸರಕಾರವು ವಾಟ್ಸ್‌ಆ್ಯಪ್ ಗೆ ಸೂಚಿಸಿದೆ. ಇದಕ್ಕೂ ಮುನ್ನ ವಾಟ್ಸ್‌ಆ್ಯಪ್ ಈ ವರ್ಷದ ಪೂರ್ವಾರ್ಧದಲ್ಲಿ ಇಸ್ರೇಲಿ ‘ಸ್ಪೈವೇರ್ ‘ಪೆಗಾಸಸ್’ನ ದಾಳಿಗೆ ಗುರಿಯಾಗಿದ್ದೀರಿ ಎನ್ನುವುದನ್ನು ತಿಳಿಸಲು ತಾನು ಹಲವಾರು ಭಾರತೀಯ ಬಳಕೆದಾರರನ್ನು ಈ ವಾರ ಸಂಪರ್ಕಿಸಿದ್ದನ್ನು ದೃಢಪಡಿಸಿತ್ತು.

ಈ ಸ್ಪೈವೇರ್ ಮೂಲಕ ನಿಗಾ ಇರಿಸಲ್ಪಟ್ಟವರಲ್ಲಿ ಪತ್ರಕರ್ತರು, ಹೋರಾಟಗಾರರು, ವಕೀಲರು ಮತ್ತು ಹಿರಿಯ ಸರಕಾರಿ ಅಧಿಕಾರಿಗಳೂ ಸೇರಿದ್ದರು. ಸಾರ್ವತ್ರಿಕ ಚುನಾವಣೆಗಳು ನಡೆದಿದ್ದ ಮೇ ತಿಂಗಳಿನವರೆಗೆ ಎರಡು ವಾರಗಳ ಈ ಕಣ್ಗಾವಲಿನಲ್ಲ್ಲಿ ಭಾರತೀಯ ಪತ್ರಕರ್ತರು ಮತ್ತು ಸಾಮಾಜಿಕ ಹೋರಾಟಗಾರರನ್ನು ಗುರಿಯಾಗಿಸಿಕೊಳ್ಳಲಾಗಿತ್ತು ಎನ್ನಲಾಗಿದೆ.

ಇಸ್ರೇಲಿನ ಸೈಬರ್ ಭದ್ರತೆ ಕಂಪನಿ ಎನ್‌ಎಸ್‌ಒ 20 ದೇಶಗಳಲ್ಲಿಯ 1,400 ಬಳಕೆದಾರರ ಮೊಬೈಲ್‌ಗಳಿಗೆ ಸ್ಪೈವೇರ್‌ನ್ನು ಹರಡಲು ವಾಟ್ಸ್‌ಆ್ಯಪ್ ಸರ್ವರ್‌ಗಳನ್ನು ಬಳಸಿಕೊಂಡಿತ್ತು ಎಂದು ಆರೋಪಿಸಿರುವ ವಾಟ್ಸ್‌ಆ್ಯಪ್‌ನ ಮಾತೃಸಂಸ್ಥೆ ಫೇಸ್‌ಬುಕ್‌ ಮಂಗಳವಾರ ಅಮೆರಿಕದ ನ್ಯಾಯಾಲಯದಲ್ಲಿ ಅದರ ವಿರುದ್ಧ ದಾವೆಯನ್ನು ಹೂಡಿದೆ. ಎನ್‌ಎಸ್‌ಒ ಅಭಿವೃದ್ಧಿಗೊಳಿಸಿದ್ದ ಪೆಗಾಸಸ್ ಸ್ಪೈವೇರ್‌ನ್ನು ಬಳಕೆದಾರರ ಮೊಬೈಲ್‌ಗಳಲ್ಲಿ ನುಸುಳಿಸಲಾಗಿತ್ತು.

 ಭೀಮಾ-ಕೋರೆಗಾಂವ್ ಪ್ರಕರಣದ ಹಲವಾರು ಆರೋಪಿಗಳನ್ನು ಪ್ರತಿನಿಧಿಸುತ್ತಿರುವ ವಕೀಲ ನಿಹಾಲ್ ಸಿಂಗ್ ರಾಠೋಡ್ ಅವರು ಸ್ಪೈವೇರ್‌ಗೆ ಗುರಿಯಾಗಿದ್ದವರಲ್ಲಿ ಒಬ್ಬರಾಗಿದ್ದಾರೆ. ಛತ್ತೀಸ್‌ಗಡದ ಸಾಮಾಜಿಕ ಕಾರ್ಯಕರ್ತೆ ಬೇಲಾ ಭಾಟಿಯಾ,ವಕೀಲ-ಹೋರಾಟಗಾರ ಡಿ.ಪಿ.ಚೌಹಾಣ್, ಮಾನವ ಹಕ್ಕು ಕಾರ್ಯಕರ್ತ ಅನಂದ ತೇಲ್ತುಂಬ್ಡೆ ಮತ್ತು ಪತ್ರಕರ್ತ ಸಿದ್ಧಾಂತ ಸಿಬಲ್ ಇತರರಲ್ಲಿ ಸೇರಿದ್ದಾರೆ.

‘ನನಗೆ ಕರೆ ಮಾಡಿದ್ದ ವ್ಯಕ್ತಿ ನನ್ನನ್ನು ಹೇಗೆ ಗುರಿಯಾಗಿಸಿಕೊಳ್ಳಲಾಗಿತ್ತು ಎನ್ನುವುದನ್ನು ವಿವರಿಸಿದ್ದ. ನಿಮ್ಮ ಸರಕಾರವೇ ಇದನ್ನು ಮಾಡಿದೆ ಎನ್ನ್ನುವುದನ್ನು ನಾವು ಸ್ಪಷ್ಟವಾಗಿ ಹೇಳಬಲ್ಲೆವು ’ಎಂದು ಹೇಳಿದ್ದ ಎಂದು ಭಾಟಿಯಾ ಸುದ್ದಿಸಂಸ್ಥೆಗೆ ತಿಳಿಸಿದರು. ಇದರಲ್ಲಿ ತನ್ನ ಯಾವುದೇ ಪಾತ್ರವನ್ನು ಸರಕಾರವು ನಿರಾಕರಿಸಿದೆ.

ಎನ್‌ಎಸ್‌ಒ ಕೂಡ ಹಗರಣದಲ್ಲಿ ತನ್ನ ಕೈವಾಡವನ್ನು ನಿರಾಕರಿಸಿದೆ. ನಮ್ಮ ತಂತ್ರಜ್ಞಾನವು ಮಾನವ ಹಕ್ಕು ಕಾರ್ಯಕರ್ತರು ಮತ್ತು ಪತ್ರಕರ್ತರ ವಿರುದ್ಧ ಬಳಕೆಗಾಗಿ ವಿನ್ಯಾಸಗೊಂಡಿಲ್ಲ. ಅದನ್ನು ಸರಕಾರಿ ಸಂಸ್ಥೆಗಳಿಗೆ ಮಾತ್ರ ಒದಗಿಸಲಾಗುತ್ತದೆ ಎಂದು ಅದು ತಿಳಿಸಿದೆ.

ಸ್ಪೈವೇರ್ ಹಗರಣದ ಕುರಿತು ಸರಕಾರದ ವಿರುದ್ಧ ದಾಳಿ ನಡೆಸಿರುವ ಕಾಂಗ್ರೆಸ್,ಅದಕ್ಕೆ ನೋಟಿಸ್ ಜಾರಿಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News