×
Ad

ಪಾಕಿಸ್ತಾನದಿಂದ ವಿಯೆನ್ನಾ ಒಡಂಬಡಿಕೆಯ ಬದ್ಧತೆಗಳ ಉಲ್ಲಂಘನೆ

Update: 2019-10-31 21:39 IST

ವಿಶ್ವಸಂಸ್ಥೆ, ಅ. 31: ಭಾರತ ರಾಷ್ಟ್ರೀಯ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನವು ವಿಯೆನ್ನಾ ಒಡಂಬಡಿಕೆಯ ಬದ್ಧತೆಗಳನ್ನು ಉಲ್ಲಂಘಿಸಿದೆ ಎಂದು ಅಂತರ್‌ರಾಷ್ಟ್ರೀಯ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಅಬ್ದುಲ್‌ಕಾವಿ ಯೂಸುಫ್ ವಿಶ್ವಸಂಸ್ಥೆಯ ಮಹಾಸಭೆಗೆ ತಿಳಿಸಿದ್ದಾರೆ.

ವಿಯೆನ್ನಾ ಒಡಂಬಡಿಕೆಯ 36ನೇ ವಿಧಿಯಡಿಯಲ್ಲಿ ಉಲ್ಲೇಖಿಸಲಾಗಿರುವ ಬದ್ಧತೆಗಳನ್ನು ಪಾಕಿಸ್ತಾನ ಉಲ್ಲಂಘಿಸಿದೆ ಹಾಗೂ ಈ ಪ್ರಕರಣದಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂಬುದಾಗಿ ತನ್ನ ಜುಲೈ 17ರ ತೀರ್ಪಿನಲ್ಲಿ ವಿಶ್ವಸಂಸ್ಥೆಯ ಪ್ರಧಾನ ನ್ಯಾಯಾಂಗ ಘಟಕವು ಹೇಳಿದೆ ಎಂದು ಯೂಸುಫ್ ಹೇಳಿದ್ದಾರೆ. ಅವರು 193 ಸದಸ್ಯರ ವಿಶ್ವಸಂಸ್ಥೆಯ ಮಹಾ ಸಭೆಯಲ್ಲಿ ಈ ಕುರಿತ ವರದಿಯೊಂದನ್ನು ಮಂಡಿಸಿ ಮಾತನಾಡುತ್ತಿದ್ದರು.

ಪಾಕಿಸ್ತಾನದ ಸೇನಾ ನ್ಯಾಯಾಲಯವೊಂದು, ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಜಾಧವ್‌ರಿಗೆ 2017 ಎಪ್ರಿಲ್‌ನಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. ಭಾರತಕ್ಕೆ ಲಭಿಸಿದ ಮಹತ್ವದ ವಿಜಯವೊಂದರಲ್ಲಿ, ಜಾಧವ್‌ಗೆ ನೀಡಿರುವ ಮರಣ ದಂಡನೆಯನ್ನು ಪಾಕಿಸ್ತಾನ ಮರುಪರಿಶೀಲಿಸಬೇಕು ಎಂದು ಅಂತರ್‌ರಾಷ್ಟ್ರೀಯ ನ್ಯಾಯಾಲಯ ತೀರ್ಪು ನೀಡಿತ್ತು.

ಇರಾನ್‌ಗೆ ವ್ಯಾಪಾರಕ್ಕಾಗಿ ಹೋಗಿದ್ದ ಜಾಧವ್‌ರನ್ನು ಪಾಕಿಸ್ತಾನ ಅಪಹರಿಸಿತ್ತು ಎಂಬುದಾಗಿ ಭಾರತ ಹೇಳುತ್ತಾ ಬಂದಿದೆ. ರಾಜತಾಂತ್ರಿಕ ಸಂಬಂಧಗಳಿಗೆ ಸಂಬಂಧಿಸಿದ 1963ರ ವಿಯೆನ್ನಾ ಒಡಂಬಡಿಕೆಯನ್ನು ಉಲ್ಲಂಘಿಸಿ, ಪಾಕಿಸ್ತಾನವು ಜಾಧವ್‌ಗೆ ರಾಜತಾಂತ್ರಿಕ ನೆರವನ್ನು ಪದೇ ಪದೇ ನಿರಾಕರಿಸುತ್ತಿದೆ ಎಂಬುದಾಗಿ ಭಾರತ ಹೇಳುತ್ತಿದೆ. ಕುಲಭೂಷಣ್ ಸುಧೀರ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನದ ಸೇನಾ ನ್ಯಾಯಾಲಯ ನೀಡಿರುವ ತೀರ್ಪು ಮತ್ತು ಶಿಕ್ಷೆಯನ್ನು ಪರಿಣಾಮಕಾರಿಯಾಗಿ ಮರುಪರಿಶೀಲಿಸಬೇಕು ಎಂಬುದಾಗಿ ಯೂಸುಫ್ ನೇತೃತ್ವದ ನ್ಯಾಯ ಪೀಠ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News