ಕೇರಳದ ಸೋಲಾರ್ ಹಗರಣ: ಸರಿತಾ ನಾಯರ್, ಪತಿಗೆ 3 ವರ್ಷ ಜೈಲು
ಕೊಯಂಬತ್ತೂರು, ಅ. 31: ಕೇರಳದಲ್ಲಿ ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆಡಳಿತದ ಸಂದರ್ಭ ಕೋಲಾಹಲ ಸೃಷ್ಟಿಸಿದ್ದ ಸೋಲಾರ್ ಹಗರಣದ ಪ್ರಧಾನ ಆರೋಪಿ ಸರಿತಾ ನಾಯರ್ ಹಾಗೂ ಇತರ ಇಬ್ಬರಿಗೆ ಗಾಳಿ ಯಂತ್ರ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕೊಯಂಬತ್ತೂರು ನ್ಯಾಯಾಲಯ ಗುರುವಾರ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಐಸಿಎಂಎಸ್ ಪವರ್ ಕಂಪೆನಿಯ ನಿರ್ದೇಶಕರಾಗಿದ್ದ ಸರಿತಾ, ಆಕೆಯ ಪತಿ ಬಿಜು ರಾಧಾಕೃಷ್ಣನ್ ಹಾಗೂ ಸಿ. ರವಿಯನ್ನು ಆರನೇ ನ್ಯಾಯಾಂಗ ದಂಡಾಧಿಕಾರಿ ಕೆ.ಆರ್. ಕಣ್ಣನ್ ದೋಷಿ ಎಂದು ಪರಿಗಣಿಸಿ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ.
ನ್ಯಾಯಾಲಯ ಮೂವರಿಗೂ ತಲಾ 10 ಸಾವಿರ ರೂಪಾಯಿ ದಂಡವನ್ನು ಕೂಡ ವಿಧಿಸಿದೆ.
ಐಸಿಎಂಎಸ್ ಪವರ್ ಕಂಪೆನಿ 10 ವರ್ಷಗಳ ಹಿಂದೆ ಗಾಳಿ ಯಂತ್ರ ಸ್ಥಾಪಿಸಿ ಕೊಡಲಾಗುವುದು ಎಂದು ಭರವಸೆ ನೀಡಿ ನಗರದ ಇಬ್ಬರು ಹೂಡಿಕೆದಾರರಿಗೆ 23 ಲಕ್ಷ ರೂಪಾಯಿ ವಂಚಿಸಿತ್ತು.
ಸೋಲಾರ್ ಹಗರಣಕ್ಕೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಕೇರಳದ ನ್ಯಾಯಾಲಯ 2016 ಡಿಸೆಂಬರ್‌ನಲ್ಲಿ ಸರಿತಾ ನಾಯರ್ ಹಾಗೂ ರಾಧಾಕೃಷ್ಣನ್‌ಗೆ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು.
ಇಲ್ಲಿನ ದಂಡಾಧಿಕಾರಿ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಕಳೆದ ಕೆಲವು ವರ್ಷಗಳಿಂದ ನಡೆದಿದ್ದು, ಗುರುವಾರ ತೀರ್ಪು ಹೊರ ಬಿದ್ದಿದೆ. ಸೋಲಾರ್ ಪ್ಯಾನಲ್ ಒದಗಿಸುವುದಾಗಿ ಭರವಸೆ ನೀಡುವ ಮೂಲಕ ಸರಿತಾ ಹಾಗೂ ಆಕೆಯ ಪತಿ ಹಲವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದರು. ಈ ಪ್ರಕರಣದಲ್ಲಿ ಉಮ್ಮನ್ ಚಾಂಡಿ ನೇತೃತ್ವದ ಯುಡಿಎಫ್ ಸರಕಾರದ ಕೆಲವು ನಾಯಕರ ಹೆಸರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಉಮ್ಮನ್ ಚಾಂಡಿ ಸರಕಾರ ತೀವ್ರ ಮುಜುಗರಕ್ಕೆ ಒಳಗಾಗಿತ್ತು.