ಸಿಪಿಐ ನಾಯಕ ಗುರುದಾಸ್ ದಾಸ್ ಗುಪ್ತಾ ನಿಧನ
Update: 2019-10-31 22:03 IST
ಹೊಸದಿಲ್ಲಿ, ಅ. 31: ಸಿಪಿಐ ನಾಯಕ ಗುರುದಾಸ್ ದಾಸ್ ಗುಪ್ತಾ ಕೋಲ್ಕತ್ತಾದ ಸ್ವಗೃಹದಲ್ಲಿ ಗುರುವಾರ ಬೆಳಗ್ಗೆ 6 ಗಂಟೆಗೆ ನಿಧನರಾದರು. ಅವರಿಗೆ 82 ವಯಸ್ಸಾಗಿತ್ತು. ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಅವರು ಮೂರು ಬಾರಿ ಪಶ್ಚಿಮಬಂಗಾಳದ ರಾಜ್ಯ ಸಭಾ ಸದಸ್ಯರಾಗಿದ್ದರು. 2004ರಲ್ಲಿ ಪನ್ಸ್‌ಕುರಾ ಹಾಗೂ 3009ರಲ್ಲಿ ಘಟಾಲ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಅಲ್ಲದೆ ಭಾರತದ ಅತ್ಯಂತ ಹಳೆಯ ಕಾರ್ಮಿಕರ ಒಕ್ಕೂಟ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ)ಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.
ದಾಸ್‌ಗುಪ್ತಾ ಕಳೆದ ಕೆಲವು ಸಮಯದಿಂದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ದುರ್ಬಲ ಆರೋಗ್ಯದ ಕಾರಣಕ್ಕೆ ಅವರು ಪಕ್ಷದ ಹುದ್ದೆಗಳನ್ನು ತ್ಯಜಿಸಿದ್ದರು ಎಂದು ಪಶ್ಚಿಮಬಂಗಾಳದ ಸಿಪಿಐ ಕಾರ್ಯದರ್ಶಿ ಸ್ವಪನ್ ಬ್ಯಾನರ್ಜಿ ಹೇಳಿದ್ದಾರೆ.