×
Ad

ಸಾರ್‌ಲಾರ್ಲಕ್ಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಲಕ್ಷ ಸೇನ್ ಪ್ರಿ-ಕ್ವಾರ್ಟರ್ ಫೈನಲ್‌ಗೆ

Update: 2019-10-31 23:33 IST

ಸಾರ್‌ಬ್ರುಕೆನ್(ಜರ್ಮನಿ),ಅ.31: ಭಾರತದ ಉದಯೋನ್ಮುಖ ಶಟ್ಲರ್ ಲಕ್ಷ ಸೇನ್ ಫಿನ್‌ಲ್ಯಾಂಡ್‌ನ ಎಟು ಹಿನೊ ಅವರ ಕಠಿಣ ಸವಾಲನ್ನು ಹಿಮ್ಮೆಟ್ಟಿಸಿ ಸಾರ್‌ಲೊರ್‌ಲುಕ್ಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್‌ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

8ನೇ ಶ್ರೇಯಾಂಕದ ಭಾರತ ಆಟಗಾರ ಸೇನ್ ಬುಧವಾರ ರಾತ್ರಿ 56 ನಿಮಿಷಗಳ ಕಾಲ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಹಿನೊರನ್ನು 21-18, 18-21,22-20 ಗೇಮ್‌ಗಳ ಅಂತರದಿಂದ ಮಣಿಸಿದರು.

ಈ ತಿಂಗಳಾರಂಭದಲ್ಲಿ ಡಚ್ ಓಪನ್‌ನಲ್ಲಿ ಚೊಚ್ಚಲ ಬಿಡಬ್ಲುಎಫ್ ವರ್ಲ್ಡ್ ಟೂರ್ ಪ್ರಶಸ್ತಿ ಜಯಿಸಿದ್ದ ಲಕ್ಷ ಸೇನ್ ಮುಂದಿನ ಸುತ್ತಿನಲ್ಲಿ ಜರ್ಮನಿಯ ಲಾರ್ಸ್ ಚಾಯೆನ್‌ಝ್ಲೆರ್‌ರನ್ನು ಎದುರಿಸಲಿದ್ದಾರೆ.

 18ರ ಹರೆಯದ ಉತ್ತರಾಖಂಡದ ಆಟಗಾರ ಸೇನ್ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರು. ನೇರ ಗೇಮ್‌ಗಳ ಅಂತರದಿಂದ ಗೆಲುವು ಸಾಧಿಸಿರುವ ಮಿಥುನ್ ಮಂಜುನಾಥ್ ಹಾಗೂ ಬಿಎಂ ರಾಹುಲ್ ಭಾರದ್ವಾಜ್ ಪ್ರಿ-ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.

 ಮಿಥುನ್ ಮಲೇಶ್ಯದ ಚಾಂಗ್ ಯೀ ಹಾನ್‌ರನ್ನು 21-15, 21-14 ಅಂತರದಿಂದ ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಇಂಗ್ಲೆಂಡ್‌ನ 5ನೇ ಶ್ರೇಯಾಂಕದ ಟೊಬಿ ಪೆಂಟಿ ಅವರನ್ನು ಎದುರಿಸಲಿದ್ದಾರೆ. ಮತ್ತೊಂದು ಪಂದ್ಯದಲ್ಲಿ ರಾಹುಲ್ ಜರ್ಮನಿಯ ಕೈ ಸ್ಚಾಫೆರ್‌ರನ್ನು 21-13, 21-15 ನೇರ ಗೇಮ್‌ಗಳ ಅಂತರದಿಂದ ಸೋಲಿಸಿದರು. ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಐರ್ಲೆಂಡ್‌ನ ಗುಯೆನ್‌ರನ್ನು ಎದುರಿಸಲಿದ್ದಾರೆ. ಇದಕ್ಕೂ ಮೊದಲು ಪ್ರಿ-ಕ್ವಾರ್ಟರ್ ಫೈನಲ್ ತಲುಪಿರುವ ಕಿರಣ್ ಜಾರ್ಜ್ ಮುಂದಿನ ಸುತ್ತಿನಲ್ಲಿ ಹಾಲೆಂಡ್‌ನ ಜೊರನ್ ಕ್ವೀಕೆಲ್‌ರನ್ನು ಮುಖಾಮುಖಿಯಾಗಲಿದ್ದಾರೆ. ಐದನೇ ಶ್ರೇಯಾಂಕದ ಮಹಿಳಾ ಡಬಲ್ಸ್ ಜೋಡಿ ಪೂಜಾ ದಂಡು ಹಾಗೂ ಸಂಜನಾ ಸಂತೋಷ್ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆಯಲು ಡೆನ್ಮಾರ್ಕ್ ಜೋಡಿ ಜುಲಿ ಫಿನ್-ಇಪ್ಸೆನ್ ಹಾಗೂ ಮೈ ಸುರ್ರೊರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News