×
Ad

ನ. 7ರ ಒಳಗೆ ಮಹಾರಾಷ್ಟ್ರ ಸರಕಾರ ರಚನೆಯಾಗದಿದ್ದರೆ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಸಾಧ್ಯತೆ: ಬಿಜೆಪಿ ನಾಯಕ

Update: 2019-11-01 19:51 IST

ಮುಂಬೈ, ನ. 7: ನವೆಂಬರ್ 7ರ ಒಳಗೆ ಮಹಾರಾಷ್ಟ್ರದಲ್ಲಿ ಸರಕಾರ ಅಸ್ತಿತ್ವಕ್ಕೆ ಬರದೇ ಇದ್ದರೆ, ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಸಾಧ್ಯತೆ ಇದೆ ಎಂದು ಹಣಕಾಸು ಸಚಿವ ಹಾಗೂ ಬಿಜೆಪಿ ನಾಯಕ ಸುಧೀರ್ ಮುಂಗಂಟಿವಾರ್ ಶುಕ್ರವಾರ ತಿಳಿಸಿದ್ದಾರೆ.

ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡು 8 ದಿನಗಳಾದರೂ ನೂತನ ಸರಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಕಾಣದ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಹೊರಬಿದ್ದಿದೆ. ಈಗ ಅಸ್ತಿತ್ವದಲ್ಲಿರುವ ವಿಧಾನ ಸಭೆ ಅವಧಿ ನವೆಂಬರ್ 8ರಂದು ಅಂತ್ಯಗೊಳ್ಳಲಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ನಡುವಿನ ಮಾತುಕತೆ ವಿಳಂಬವಾಯಿತು. ಇನ್ನು ಒಂದೆರೆಡು ದಿನಗಳಲ್ಲಿ ಮಾತುಕತೆ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.

‘‘ಮಹಾರಾಷ್ಟ್ರದ ಮತದಾರರು ಯಾವುದೇ ಒಂದು ಪಕ್ಷಕ್ಕೆ ಜನಾದೇಶ ನೀಡಿಲ್ಲ. ಆದರೆ, ಮೈತ್ರಿ (ಬಿಜೆಪಿ, ಶಿವಸೇನೆ, ಇತರ ಪಕ್ಷಗಳ ಮೈತ್ರಿ)ಗೆ ಜನಾದೇಶ ನೀಡಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ. ‘‘‘ನಮ್ಮ ಮೈತ್ರಿ ಫೆವಿಕಾಲ್ ಹಾಗೂ ಅಂಬುಜಾ ಸಿಮೆಂಟ್‌ಗಿಂತ ಗಟ್ಟಿಯಾದುದು’’ ಎಂದು ಅವರು ಹೇಳಿದರು. ನಿಗದಿತ ಸಮಯದ ಒಳಗಡೆ ನೂತನ ಸರಕಾರ ಅಸ್ತಿತ್ವಕ್ಕೆ ಬರಲಿದೆ ಅಥವಾ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಲಿದ್ದಾರೆ ಎಂದು ಅವರು ತಿಳಿಸಿದರು.

ಶಿವಸೇನೆ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಆಗ್ರಹಿಸುತ್ತಿರುವುದು ಸರಕಾರ ರಚನೆಗೆ ಇರುವ ಪ್ರಮುಖ ಅಡ್ಡಿ ಎಂದು ಅವರು ಹೇಳಿದರು. ರಾಜ್ಯ ಮಟ್ಟದಲ್ಲಿ ನಾವು ಮಾತುಕತೆ ನಡೆಸಿ ಬಿಕ್ಕಟ್ಟು ಪರಿಹರಿಸಲು ಯತ್ನಿಸಲಿದ್ದೇವೆ. ಅಗತ್ಯವಾದರೆ, ಬಿಜೆಪಿಯ ಕೇಂದ್ರ ನಾಯಕತ್ವ ಮಧ್ಯ ಪ್ರವೇಶಿಸಲಿದೆ ಎಂದು ಅವರು ತಿಳಿಸಿದರು. ಸರಕಾರ ರಚನೆ ಬಗ್ಗೆ ಶಿವಸೇನೆಯ ನಾಯಕ ಸಂಜಯ್ ರಾವತ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಂತೆ ಶಿವಸೇನೆ ಕೂಡ ಆದಷ್ಟು ಬೇಗ ಸರಕಾರ ರಚಿಸಬೇಕು ಎಂದು ಬಯಸುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News