ಮಹಾರಾಷ್ಟ್ರದಲ್ಲಿ ಸರಕಾರ ರಚನೆ: ಉದ್ಧವ್ ಠಾಕ್ರೆ, ಶರದ್ ಪವಾರ್ ಮಾತುಕತೆ
ಮುಂಬೈ, ನ. 1: ಮಹಾರಾಷ್ಟ್ರದಲ್ಲಿ ಸರಕಾರ ರಚಿಸುವ ಕುರಿತು ಶಿವಸೇನೆ ಹಾಗೂ ಬಿಜೆಪಿ ನಡುವೆ ಬಿಕ್ಕಟ್ಟು ಮುಂದುವರಿಯುತ್ತಿರುವಂತೆ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರು ನ್ಯಾಶನಲ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ನಾಯಕ ಶರದ್ ಪವಾರ್ ಅವರೊಂದಿಗೆ ಗುರುವಾರ ರಾತ್ರಿ ಫೋನ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ಈ ವಿಚಾರವನ್ನು ಉಭಯ ಪಕ್ಷಗಳು ದೃಢಪಡಿಸಿವೆ.
ಶರದ್ ಪವಾರ್ ಅವರ ನಿವಾಸದಲ್ಲಿದ್ದ ಶಿವಸೇನೆಯ ನಾಯಕ ಸಂಜಯ್ ರಾವತ್‌ಗೆ ಕರೆ ಮಾಡಿದ ಸಂದರ್ಭ ಉದ್ಧವ್ ಠಾಕ್ರೆ ಅವರು ಶರದ್ ಪವಾರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಕೊರತೆ ಬೀಳುವ ಸ್ಥಾನಗಳ ವಿಚಾರದಲ್ಲಿ ಶಿವಸೇನೆಗೆ ಎನ್‌ಸಿಪಿ ಹಾಗೂ ಕಾಂಗ್ರೆಸ್ ಬೆಂಬಲ ನೀಡುವ ಬಗ್ಗೆ ಉನ್ನತ ಮಟ್ಟದಲ್ಲಿ ವದಂತಿಗಳು ಹರಡಿರುವ ಸಂದರ್ಭ ಈ ಬೆಳವಣಿಗೆ ನಡೆದಿದೆ.
ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಜೊತೆಯಾಗಿ ಸ್ಪರ್ಧಿಸಿತ್ತು. ಶಿವಸೇನೆ 56 ಹಾಗೂ ಬಿಜೆಪಿ 105 ಸ್ಥಾನಗಳನ್ನು ಗಳಿಸಿತ್ತು. ಖಾತೆ ಹಂಚಿಕೆ ಹಾಗೂ ಮುಖ್ಯಮಂತ್ರಿ ಹುದ್ದೆಯನ್ನು ತಲಾ ಎರಡೂವರೆ ವರ್ಷಗಳ ಕಾಲ ನಿರ್ವಹಿಸುವ ಒಪ್ಪಂದದ ಕುರಿತು ಉಭಯ ಪಕ್ಷಗಳ ನಡುವೆ ಬಿಕ್ಕಟ್ಟು ಉಂಟಾಗಿತ್ತು. 54 ಶಾಸಕರು ಇರುವ ಎನ್‌ಸಿಪಿ ಹಾಗೂ 44 ಶಾಸಕರಿರುವ ಕಾಂಗ್ರೆಸ್ ಶಿವಸೇನೆಗೆ ಬೆಂಬಲ ನೀಡುವ ಸಾಧ್ಯತೆ ಬಗ್ಗೆ ಠಾಕ್ರೆ ಹಾಗೂ ಪವಾರ್ ನಡುವೆ ಗುರುವಾರ ರಾತ್ರಿ ನಡೆದ ಮಾತುಕತೆಯಲ್ಲಿ ಪ್ರಸ್ತಾಪವಾಗಿರುವ ಸಾಧ್ಯತೆ ಇದೆ. ಶರದ್ ಪವಾರ್ ಅವರೊಂದಿಗಿನ ಭೇಟಿಯ ಬಳಿಕ ಸಂಜಯ್ ರಾವತ್, ‘‘ಶಿವಸೇನೆ ನಿರ್ಧರಿಸಿದರೆ, ರಾಜ್ಯದಲ್ಲಿ ಸ್ಥಿರ ಸರಕಾರ ರಚಿಸುವಷ್ಟು ಸಂಖ್ಯೆಯ ಶಾಸಕರ ಬೆಂಬಲ ಪಡೆಯಲಿದೆ’’ ಎಂದು ಬಿಜೆಪಿಗೆ ಎಚ್ಚರಿಕೆ ನಿಡಿದ್ದಾರೆ.