ಮೊಬೈಲ್ ಬ್ಯಾಂಕಿಂಗ್: ನಿಮ್ಮ ವಹಿವಾಟುಗಳನ್ನು ಸುರಕ್ಷಿತವಾಗಿಸುವುದು ಹೇಗೆ?

Update: 2019-11-01 15:01 GMT

ನಗದು ವ್ಯವಹಾರ ಈಗಲೂ ಹೆಚ್ಚಿನವರ ಆದ್ಯತೆಯಾಗಿರಬಹುದು. ಇದೇ ವೇಳೆ ಆನ್‌ ಲೈನ್ ವಹಿವಾಟುಗಳಲ್ಲಿ ಮೊಬೈಲ್ ಫೋನ್‌ಗಳ ಬಳಕೆಯು ಹೆಚ್ಚುತ್ತಿದೆ. ಮೊಬೈಲ್ ಮೂಲಕ ಬ್ಯಾಂಕ್ ವಹಿವಾಟುಗಳಿಗಾಗಿರುವ ಯುಪಿಐನಲ್ಲಿ ವಹಿವಾಟುಗಳ ಸಂಖ್ಯೆ ಒಂದು ಶತಕೋಟಿಯನ್ನು ದಾಟಿದೆ. ಮೌಲ್ಯದ ಲೆಕ್ಕದಲ್ಲಿ ನ್ಯಾಷನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್ (ನೆಫ್ಟ್) ಈಗಲೂ ಅಗ್ರಪಾಲು ಹೊಂದಿದೆಯಾದರೂ,ಮೊಬೈಲ್ ಬ್ಯಾಂಕಿಂಗ್ ಜನರು ಖಾತೆಗೆ ಲಾಗ್‌ ಆನ್ ಆಗುವ ಮತ್ತು ವೆಬ್‌ ಸೈಟ್‌ ಗಳಲ್ಲಿ ವ್ಯವಹರಿಸುವ ಕಿರಿಕಿರಿಯಿಲ್ಲದೆ ವಹಿವಾಟುಗಳನ್ನು ನಡೆಸುವುದನ್ನು ಸುಲಭವಾಗಿಸಿದೆ.

ಅದೊಂದು ಕಾಲವಿತ್ತು. ಬ್ಯಾಂಕಿನ ಮೂಲಕ ಯಾರಿಗಾದರೂ ಹಣ ರವಾನಿಸಬೇಕಿದ್ದರೆ ಬ್ಯಾಂಕಿನ ಕೆಲಸದ ಅವಧಿಯಲ್ಲಿ ತೆರಳಿ ಆ ಕಾರ್ಯವನ್ನು ಮಾಡಿಕೊಳ್ಳಬೇಕಿತ್ತು. ಈಗ ಬೆರಳ ತುದಿಯಲ್ಲೇ ಮೊಬೈಲ್ ಮೂಲಕ ವಾರದ ಏಳೂ ದಿನಗಳ ಕಾಲ ಯಾವುದೇ ಸಮಯದಲ್ಲಿಯೂ ಇನ್ನೊಂದು ಖಾತೆಗೆ ಹಣವನ್ನು ವರ್ಗಾಯಿಸಬಹುದು. ತಂತ್ರಜ್ಞಾನದಲ್ಲಿ ಸುಧಾರಣೆಯಾಗುತ್ತಿದ್ದಂತೆ ಸೌಲಭ್ಯಗಳು ಹೆಚ್ಚುತ್ತಿವೆ. ಆದರೆ ಈ ಅನುಕೂಲಗಳ ಜೊತೆಗೇ ಭದ್ರತಾ ಸವಾಲುಗಳೂ ಎದುರಾಗುತ್ತವೆ. ಮೊಬೈಲ್‌ಗಳೂ ಸುರಕ್ಷಿತವಲ್ಲ. ಹ್ಯಾಕರ್‌ಗಳು ವಿಶ್ವದ ಯಾವುದೋ ಮೂಲೆಯಲ್ಲಿ ಕುಳಿತು ಕಂಪ್ಯೂಟರ್‌ಗಳು, ಮೊಬೈಲ್‌ಗಳಿಗೆ ಕನ್ನ ಹಾಕುವ ಮೂಲಕ ನಮ್ಮ ಬ್ಯಾಂಕ್ ಖಾತೆಗಳಲ್ಲಿಯ ದುಡ್ಡನ್ನು ದೋಚುತ್ತಾರೆ. ಹೊಸ ಹೊಸ ವೈರಸ್‌ಗಳು ಮತ್ತು ಟ್ರೋಝನ್‌ಗಳು ಫೋನ್‌ಗಳಿಗೆ ದಾಳಿಯಿಡುವುದರಿಂದ ಮೊಬೈಲ್ ಫೋನ್‌ನಲ್ಲಿ ವಹಿವಾಟುಗಳನ್ನು ನಡೆಸುವವರು ಅತ್ಯಂತ ಎಚ್ಚರಿಕೆಯಿಂದಿರಬೇಕು.

ಹೆಚ್ಚಿನ ಬ್ಯಾಂಕುಗಳ ಮೊಬೈಲ್ ಆ್ಯಪ್‌ಗಳು ಹೆಚ್ಚುವರಿ ಸುರಕ್ಷಾ ವ್ಯವಸ್ಥೆಗಳನ್ನು ಹೊಂದಿವೆಯಾದರೂ ಗ್ರಾಹಕರೂ ಸುರಕ್ಷಾ ಮಾಧ್ಯಮಗಳ ಕಾಳಜಿಯನ್ನು ವಹಿಸುವ ಅಗತ್ಯವಿದೆ. ಆನ್‌ಲೈನ್ ವಹಿವಾಟುಗಳ ಸುರಕ್ಷತೆಯನ್ನು ಕಾಯ್ದುಕೊಳ್ಳಲು ನೆರವಾಗುವ ಕೆಲವು ಟಿಪ್ಸ್ ಇಲ್ಲಿವೆ.......

ವಿವಿಧ ಬ್ಯಾಂಕುಗಳು ಮತ್ತು ಪೇಮೆಂಟ್ ಕಂಪನಿಗಳು ಹಲವಾರು ಯುಪಿಐ ಆ್ಯಪ್‌ಗಳನ್ನು ಒದಗಿಸುತ್ತಿವೆಯಾದರೂ ಈ ಆ್ಯಪ್‌ಗಳ ಹಲವಾರು ತದ್ರೂಪಿ ಸೃಷ್ಟಿಗಳೂ ಅಥವಾ ನಕಲಿ ಆ್ಯಪ್‌ಗಳೂ ಇವೆ ಮತ್ತು ಇವು ಗ್ರಾಹಕರ ಡಾಟಾ ಕಳ್ಳತನಕ್ಕೆ ನೆರವಾಗುತ್ತವೆ. ನೀವು ಬಳಸುತ್ತಿರುವ ಆ್ಯಪ್‌ನ ಋಜುತ್ವವನ್ನು ದೃಢಪಡಿಸಿಕೊಳ್ಳಲು ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಪ್ರೊಟೆಕ್ಟ್‌ನ್ನು ಆನ್‌ನಲ್ಲಿಡಿ. ಕೆಲವು ದುರುದ್ದೇಶಪೂರಿತ ಆ್ಯಪ್‌ಗಳೂ ಗೂಗಲ್ ಪ್ರೊಟೆಕ್ಟ್‌ನ ತಪಾಸಣೆಯಲ್ಲಿ ತಮ್ಮ ಗುಟ್ಟು ಬಿಟ್ಟುಕೊಡುವುದಿಲ್ಲ. ಹೀಗಾಗಿ ಆ್ಯಪ್ ವೆಂಡರ್ ತಪಾಸಣೆ ಉತ್ತಮವಾಗಿದೆ. ಇದು ನೀವು ಬಳಸುತ್ತಿರುವ ಆ್ಯಪ್ ಅಧಿಕೃತವೇ ಎನ್ನುವ ಸ್ಪಷ್ಟತೆಯನ್ನು ಒದಗಿಸುತ್ತದೆ. ಕೇವಲ್ ಭೀಮ್ ಹೆಸರಿನಿಂದ ಹೋಗಬೇಡಿ,ನಕಲಿ ಆ್ಯಪ್‌ಗಳೂ ಭೀಮ್ ಹೆಸರನ್ನು ಹೊಂದಿರುತ್ತವೆ. ಇಂಟರ್‌ಫೇಸ್ ಕೂಡ ಅಧಿಕೃತ ಯುಪಿಐ ಆ್ಯಪ್‌ಗಳನ್ನು ಹೋಲುತ್ತದೆ.

ಯಾವುದೇ ಯುಪಿಐ ಆ್ಯಪ್ ಸಿವಿವಿ (ಕಾರ್ಡ್‌ನ ಹಿಂಬದಿಯಲ್ಲಿರುವ ಮೂರು ಅಂಕಿಗಳು) ಮತು ಇತರ ವಿವರಗಳು ಸೇರಿದಂತೆ ಡೆಬಿಟ್ ಕಾರ್ಡ್‌ನ ಸಂಪೂರ್ಣ ವಿವರಗಳನ್ನು ಕೇಳುವುದಿಲ್ಲ ಎನ್ನುವುದು ಸದಾ ನೆನಪಿನಲ್ಲಿರಲಿ. ಯುಪಿಐ ಆ್ಯಪ್ ನಿಮ್ಮ ಕಾರ್ಡ್‌ನ ಕೊನೆಯ 4-6 ಅಂಕಿಗಳನ್ನು ಮತ್ತು ಸಿವಿವಿಯನ್ನು ಮಾತ್ರ ಕೇಳುತ್ತದೆ,ಬೇರೇನನ್ನೂ ಅದು ಕೇಳುವುದಿಲ್ಲ.

 ಹೆಚ್ಚಿನ ಬ್ಯಾಂಕುಗಳು ಎರಡು ಹಂತಗಳ ದೃಢೀಕರಣ ಸೌಲಭ್ಯಗಳನ್ನು ಒದಗಿಸುತ್ತಿವೆ ಮತ್ತು ಆ್ಯಪ್‌ಗಳು ಈಗ ಹೆಚ್ಚುವರಿ ಸುರಕ್ಷತಾ ಕ್ರಮಗಳೊಂದಿಗೆ ಬರುತ್ತಿವೆ. ಹೀಗಿದ್ದರೂ ನಿಮ್ಮ ಫೋನ್‌ಗೆ ಮತ್ತು ಬ್ಯಾಂಕಿಂಗ್ ಆ್ಯಪ್‌ಗೆ ಒಂದೇ ಪಾಸ್‌ವರ್ಡ್‌ನ್ನು ನೀಡಬೇಡಿ. ಬ್ಯಾಂಕಿಂಗ್ ಮತ್ತು ಯುಪಿಐಗೆ ಒಂದೇ ರೀತಿಯ ಪಿನ್‌ಗಳನ್ನು ಬಳಸುವುದು ನಿಮ್ಮ ಫೋನ್‌ನ್ನು ಬಳಸುವ ಯಾರಾದರೂ ವಹಿವಾಟು ಆರಂಭಿಸುವುದನ್ನು ಸುಲಭವಾಗಿಸುತ್ತದೆ. ಅಲ್ಲದೆ ರಕ್ಷಣೆಯ ಹೆಚ್ಚುವರಿ ಹಂತವೊಂದನ್ನು ಹೊಂದಿರಲು ಫೋನ್‌ನ ಪಾಸ್‌ವರ್ಡ್ ಪ್ರೊಟೆಕ್ಟ್ ಅಥವಾ ಥರ್ಡ್ ಪಾರ್ಟಿ ಪ್ರೊಟೆಕ್ಟ್ ಆ್ಯಪ್‌ನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

 ವಾಟ್ಸ್‌ಆ್ಯಪ್ ಬಳಕೆಯು ಹೆಚ್ಚುತ್ತಿದ್ದಂತೆ ಎಸ್‌ಎಂಎಸ್ ಅಲರ್ಟ್‌ಗಳನ್ನು ಪರಿಶೀಲಿಸುವುದನ್ನು ನಾವು ಮರೆತೇಬಿಟ್ಟಿದ್ದೇವೆ. ನೀವು ನಿಮ್ಮ ಮೊಬೈಲ್ ಫೋನ್ ನಂಬರ್‌ನ್ನು ನಿಮ್ಮ ಬ್ಯಾಂಕಿನಲ್ಲಿ ನೋಂದಣಿ ಮಾಡಿಸಿದ್ದರೆ ನಿಮ್ಮ ಖಾತೆಯಲ್ಲಿ ಯಾವುದೇ ವಹಿವಾಟು ನಡೆದರೂ ತಕ್ಷಣ ನಿಮ್ಮ ಮೊಬೈಲ್‌ಗೆ ಸಂದೇಶ ರವಾನೆಯಾಗುತ್ತದೆ. ಇಂತಹ ಎಸ್‌ಎಂಎಸ್‌ಗಳ ಬಗ್ಗೆ ಸದಾ ನಿಗಾಯಿರಿಸಿದರೆ ನಿಮಗೆ ಗೊತ್ತಿಲ್ಲದೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ವ್ಯವಹಾರಗಳು ನಡೆದರೆ ತಕ್ಷಣ ಬ್ಯಾಂಕಿನ ಗಮನಕ್ಕೆ ತರಲು ಸಾಧ್ಯವಾಗುತ್ತದೆ.

ನಿಮಗೆ ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗದಿದ್ದರೆ ಮೊಬೈಲ್‌ನಲ್ಲಿ ದಾಖಲಿಸುವ ಅಥವಾ ಬರೆದಿಡುವ ಗೋಜಿಗೆ ಹೋಗಲೇಬೇಡಿ. ಥರ್ಡ್ ಪಾರ್ಟಿ,ಆದರೆ ನಂಬಿಕಸ್ಥ ಪಾಸ್‌ವರ್ಡ್ ಸ್ಟೋರೇಜ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ನಿಮ್ಮ ಪಾಸ್‌ವರ್ಡ್‌ಗಳನ್ನು ಸ್ಟೋರ್ ಮಾಡಿಡಿ. ಲಾಸ್ಟ್‌ಪಾಸ್,ಡ್ಯಾಷ್‌ಲೇನ್,ಇಂಟೆಲ್‌ನ ಟ್ರೂ ಕೀ ಇವು ಬಳಸಲು ಸುಲಭವಾಗಿರುವ,ಸುರಕ್ಷಿತ ಆ್ಯಪ್‌ಗಳಾಗಿವೆ. ಅಲ್ಲದೆ ಯಾವುದೇ ಪಾಸ್‌ವರ್ಡ್‌ನ್ನು ಪುನರಾವರ್ತಿಸ ಬೇಡಿ.

 ಆ್ಯಂಟಿವೈರಸ್ ಅಳವಡಿಕೆ ನಿಮ್ಮ ಫೋನ್ ಮತ್ತು ಮಾಲ್‌ವೇರ್‌ಗಳ ನಡುವೆ ಮೊದಲ ರಕ್ಷಣಾ ಗೋಡೆಗಳಲ್ಲೊಂದಾಗಿದೆ. ಒಳ್ಳೆಯ ಆ್ಯಂಟಿವೈರಸ್ ಟ್ರೋಝ್‌ನ್‌ಗಳು ಮತ್ತು ವೈರಸ್‌ಗಳನ್ನು ದೂರವೇ ಇಡುತ್ತದೆ ಮತ್ತು ಹ್ಯಾಕರ್‌ಗಳಿಗೆ ನಿಮ್ಮ ಫೋನಿನ ಪ್ರವೇಶವನ್ನು ಕಷ್ಟವಾಗಿಸುತ್ತವೆ. ಹಲವಾರು ಉಚಿತ ಆ್ಯಂಟಿವೈರಸ್‌ಗಳು ಲಭ್ಯವಿವೆಯಾದರೂ ನಿಮ್ಮ ಫೋನ್ ಹಣಪಾವತಿ ಮತ್ತು ಬ್ಯಾಂಕಿಂಗ್ ವಹಿವಾಟುಗಳಿಗೆ ಬಳಕೆಯಾಗುತ್ತದೆ ಎನ್ನುವುದನ್ನು ಪರಿಗಣಿಸಿದರೆ ಹಣವನ್ನು ನೀಡಿ ಒಳ್ಳೆಯ ಆ್ಯಂಟಿವೈರಸ್‌ನ್ನು ಖರೀದಿಸುವುದು ನಿಮ್ಮ ಪಾಲಿಗೆ ಉತ್ತಮ ಹೂಡಿಕೆಯಾಗುತ್ತದೆ. ನಾಡ್32,ನಾರ್ಟನ್ ಮತ್ತು ಅವಿರಾ ಉತ್ತಮ ಆಯ್ಕೆಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News