×
Ad

ಮೊಟ್ಟೆ ಸೇವನೆಯಿಂದ ಮಕ್ಕಳು ನರಭಕ್ಷಕರಾಗಬಹುದು ಎಂದ ಬಿಜೆಪಿ ನಾಯಕ!

Update: 2019-11-01 21:32 IST

ಭೋಪಾಲ,ನ.1: ರಾಜ್ಯ ಸರಕಾರದ ಮಧ್ಯಾಹ್ನದೂಟ ಯೋಜನೆಯಲ್ಲಿ ಮೊಟ್ಟೆಯ ಸೇರ್ಪಡೆಯು ಮಕ್ಕಳನ್ನು ನರಭಕ್ಷಕರನ್ನಾಗಿ ಮಾಡಬಹುದು ಎಂದು ಮಧ್ಯಪ್ರದೇಶದ ವಿಪಕ್ಷ ನಾಯಕ ಗೋಪಾಲ ಭಾರ್ಗವ ಹೇಳಿದ್ದಾರೆ.

ಅಪೌಷ್ಟಿಕತೆಯನ್ನು ತಡೆಯಲು ಶಾಲಾಮಕ್ಕಳಿಗೆ ಮಧ್ಯಾಹ್ನದೂಟದಲ್ಲಿ ಮೊಟ್ಟೆಯನ್ನು ನೀಡುವುದಾಗಿ ರಾಜ್ಯ ಸರಕಾರವು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕನ ಈ ಹೇಳಿಕೆ ಹೊರಬಿದ್ದಿದೆ.

“ಖುದ್ದು ಅಪೌಷ್ಟಿಕತೆಯಿಂದ ನರಳುತ್ತಿರುವ ಈ ಸರಕಾರದಿಂದ ಬೇರೇನನ್ನು ನಿರೀಕ್ಷಿಸಲು ಸಾಧ್ಯ?, ಇಂದು ಅವರು ಮಕ್ಕಳಿಗೆ ಮೊಟ್ಟೆ ನೀಡುತ್ತಿದ್ದಾರೆ. ಇದರಿಂದ ಸಮಸ್ಯೆ ಬಗೆಹರಿಯದಿದ್ದರೆ ಅವರು ಮಕ್ಕಳಿಗೆ ಮಟನ್ ಮತ್ತು ಚಿಕನ್ ನೀಡುತ್ತಾರೆ. ನಾವು ಮಕ್ಕಳಿಗೆ ಬಾಲ್ಯದಿಂದಲೇ ಮಾಂಸಾಹಾರ ಸೇವನೆಯನ್ನು ಕಲಿಸಿದರೆ ಅವರು ಬೆಳೆದ ಮೇಲೆ ನರಭಕ್ಷಕರಾಗಿ ಪರಿವರ್ತನೆಗೊಳ್ಳಬಹುದು” ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದ ಭಾರ್ಗವ, “ನಮ್ಮ ಸಂಸ್ಕೃತಿಯಲ್ಲಿ ಮಾಂಸಾಹಾರವನ್ನು ನಿಷೇಧಿಸಲಾಗಿದೆ ಮತ್ತು ಮೊಟ್ಟೆಗಳನ್ನು ತಿನ್ನುವಂತೆ ಯಾರನ್ನೂ ಬಲವಂತಗೊಳಿಸುವಂತಿಲ್ಲ” ಎಂದರು.

ರಾಜ್ಯದಲ್ಲಿ ಅಪೌಷ್ಟಿಕತೆಯನ್ನು ತಡೆಯಲು ನ.1ರಿಂದ ಅಂಗನವಾಡಿಗಳಲ್ಲಿ ಮಧ್ಯಾಹ್ನದೂಟದಲ್ಲಿ ಮಕ್ಕಳಿಗೆ ಮೊಟ್ಟೆಗಳನ್ನು ನೀಡಲು ಸರಕಾರವು ನಿರ್ಧರಿಸಿದೆ ಎಂದು ಮಧ್ಯಪ್ರದೇಶ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಇಮರತಿ ದೇವಿ ಅವರು ಬುಧವಾರ ಪ್ರಕಟಿಸಿದ್ದರು.

ವ್ಯಾಪಕ ವಿರೋಧದ ಬಳಿಕ ಇಮರತಿ ದೇವಿ ಅವರು,ಅಪೌಷ್ಟಿಕ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಅವರ ಉತ್ತಮ ಆರೋಗ್ಯಕ್ಕಾಗಿ ಮೊಟ್ಟೆಯನ್ನು ಶಿಫಾರಸು ಮಾಡಿದ್ದಾರೆ. ಅಲ್ಲದೆ ಮೊಟ್ಟೆ ಮಾಂಸಾಹಾರವಲ್ಲ,ಅದು ಸಸ್ಯಾಹಾರವಾಗಿದೆ ಎಂದು ಹೇಳಿದ್ದರು.

ಸರಕಾರದ ಕ್ರಮವನ್ನು ವಿರೋಧಿಸಿರುವ ಹಲವಾರು ಬಿಜೆಪಿ ನಾಯಕರು,ಇತರ ಹಲವಾರು ಪರ್ಯಾಯ ಆಹಾರಗಳಿವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನೇತೃತ್ವದ ಸರಕಾರವು ಜನರ ನಂಬಿಕೆಗಳು ಮತ್ತು ಭಾವನೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಷ ವಿಜಯವರ್ಗೀಯ ಅವರು,ಸರಕಾರದ ನಿರ್ಧಾರವನ್ನು ತನ್ನ ಪಕ್ಷವು ವಿರೋಧಿಸುತ್ತದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News