ಚಿದಂಬರಂ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ದಿಲ್ಲಿ ಉಚ್ಚ ನ್ಯಾಯಾಲಯ

Update: 2019-11-01 16:21 GMT

ಹೊಸದಿಲ್ಲಿ,ನ.1: ಐಎನ್‌ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ ಜೈಲಿನಲ್ಲಿರುವ ಮಾಜಿ ವಿತ್ತಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರ ಆರೋಗ್ಯ ಚೆನ್ನಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ ಎಂದು ಏಮ್ಸ್ ವೈದ್ಯಕೀಯ ಮಂಡಳಿಯು ಶುಕ್ರವಾರ ತನ್ನ ವರದಿಯಲ್ಲಿ ತಿಳಿಸಿದ ಹಿನ್ನೆಲೆಯಲ್ಲಿ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ.

ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಚಿದಂಬರಂ ಆರೋಗ್ಯ ತಪಾಸಣೆಗಾಗಿ ಏಮ್ಸ್ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿತ್ತು.

ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾ.ಸುರೇಶ ಕೈಟ್ ಅವರು ಚಿದಂಬರಂ ಅವರಿಗೆ ಶುದ್ಧ ಮತ್ತು ಆರೋಗ್ಯಕರ ಪರಿಸರದ ಜೊತೆಗೆ ಮನೆಯೂಟ,ಮಿನರಲ್ ನೀರು,ಸೊಳ್ಳೆ ಪರದೆ ಮತ್ತು ಸೊಳ್ಳೆ ನಿವಾರಕಗಳನ್ನು ಒದಗಿಸುವಂತೆ ತಿಹಾರ ಜೈಲು ಅಧೀಕ್ಷಕರಿಗೆ ನಿರ್ದೇಶ ನೀಡಿದರು. ನಿಯಮಿತವಾಗಿ ಚಿದಂಬರಂ ಅವರ ಆರೋಗ್ಯ ತಪಾಸಣೆಯನ್ನು ನಡೆಸುವಂತೆಯೂ ನ್ಯಾಯಾಲಯವು ಆದೇಶಿಸಿತು.

ಕ್ರೋನ್ಸ್ ಕಾಯಿಲೆಯಿಂದ ಬಳಲುತ್ತಿರುವ ಚಿದಂಬರಂ ಆರೋಗ್ಯ ಸ್ಥಿತಿಯ ಬಗ್ಗೆ ಅಭಿಪ್ರಾಯ ನೀಡಲು ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ಗುರುವಾರ ಏಮ್ಸ್ ನಿರ್ದೇಶಕರಿಗೆ ನಿರ್ದೇಶ ನೀಡಿದ್ದ ಉಚ್ಚ ನ್ಯಾಯಾಲಯವು,ಅವರಿಗೆ ಚಿಕಿತ್ಸೆ ನೀಡುತ್ತಿರುವ ಹೈದರಾಬಾದ್‌ನ ವೈದ್ಯ ನಾಗೇಶ್ವರ ರೆಡ್ಡಿ ಅವರನ್ನೂ ಮಂಡಳಿಯಲ್ಲಿ ಸೇರ್ಪಡೆಗೊಳಿಸುವಂತೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News