ದೇವಧರ್ ಟ್ರೋಫಿ: ಭಾರತ ‘ಸಿ’ ಪೈನಲ್ ಪ್ರವೇಶ
ರಾಂಚಿ, ನ.1: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶುಭಮನ್ ಗಿಲ್ ಹಾಗೂ ಮಾಯಾಂಕ್ ಅಗರ್ವಾಲ್ ಆಕರ್ಷಕ ಶತಕ ಹಾಗೂ ಆಲ್‌ರೌಂಡರ್ ಜಲಜ್ ಸಕ್ಸೇನಾ ಅವರ ಜೀವನಶ್ರೇಷ್ಠ ಬೌಲಿಂಗ್ ನೆರವಿನಿಂದ ಭಾರತ ‘ಎ’ ತಂಡವನ್ನು 232 ರನ್‌ಗಳಿಂದ ಹೀನಾಯವಾಗಿ ಸೋಲಿಸಿದ ಭಾರತ ‘ಸಿ’ ತಂಡ ದೇವಧರ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ.
ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ‘ಸಿ’ ತಂಡ ನಿಗದಿತ 50 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 366 ರನ್‌ಗಳಿಸಿತು. ಭಾರತ ‘ಸಿ’ ತಂಡದ ನಾಯಕ ಗಿಲ್(143 ರನ್, 142 ಎಸೆತ) ಹಾಗೂ ಟೆಸ್ಟ್ ಓಪನರ್ ಅಗರ್ವಾಲ್(120 ರನ್, 111 ಎಸೆತ)ಮೊದಲ ವಿಕೆಟ್‌ಗೆ 226 ರನ್ ಜೊತೆಯಾಟ ನಡೆಸಿ ತಂಡ ಉತ್ತಮ ಮೊತ್ತ ಗಳಿಸಲು ಭದ್ರಬುನಾದಿ ಹಾಕಿಕೊಟ್ಟರು. ಸೂರ್ಯಕುಮಾರ್ ಯಾದವ್(ಔಟಾಗದೆ 72, 29 ಎಸೆತ)ಭಾರತದ ಮೊತ್ತವನ್ನು 336ಕ್ಕೆ ತಲುಪಿಸಿದರು.
ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಭಾರತ ‘ಎ’ ತಂಡ ಆಫ್-ಸ್ಪಿನ್ನರ್ ಸಕ್ಸೇನಾ (7-41) ಅವರ ಅಮೋಘ ಬೌಲಿಂಗ್ ದಾಳಿಗೆ ತತ್ತರಿಸಿ ಬ್ಯಾಟಿಂಗ್ ವೈಫಲ್ಯಕ್ಕೀಡಾಯಿತು. 29.5 ಓವರ್‌ಗಳಲ್ಲಿ 134 ರನ್‌ಗಳಿಗೆ ಆಲೌಟಾಯಿತು. ಸತತ ಎರಡನೇ ದಿನ ಎರಡನೇ ಸೋಲು ಕಂಡಿರುವ ಭಾರತ ಎ ತಂಡ ಟೂರ್ನಿಯಿಂದ ನಿರ್ಗಮಿಸಿದೆ.
ಭಾರತ ‘ಸಿ’ ಹಾಗೂ ಭಾರತ ‘ಬಿ’ ತಂಡಗಳು ಸೋಮವಾರ ಫೈನಲ್‌ನಲ್ಲಿ ಸೆಣಸಾಡಲಿವೆ. ಭಾರತ‘ಬಿ’ ತಂಡ ಗುರುವಾರ ಭಾರತ ‘ಎ’ ತಂಡವನ್ನು ಮಣಿಸಿತ್ತು. ಭಾರತ ‘ಸಿ’ ಹಾಗೂ ‘ಬಿ’ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುವ ಮೊದಲು ಶನಿವಾರ ಕೊನೆಯ ಲೀಗ್ ಪಂದ್ಯವನ್ನು ಆಡಲಿವೆ.
ಭಾರತ ‘ಸಿ’ ತಂಡದ ಅಗರ್ವಾಲ್ ಹಾಗೂ ಗಿಲ್ ರನ್ ಹೊಳೆ ಹರಿಸಿ ಭಾರತ ‘ಎ’ ಆಟಗಾರರನ್ನು ಸ್ಪರ್ಧೆಯಿಂದ ಹೊರಗಿಟ್ಟರು. ದಕ್ಷಿಣ ಆಫ್ರಿಕಾ ವಿರುದ್ಧ ಸ್ವದೇಶದಲ್ಲಿ ನಡೆದಿದ್ದ ಟೆಸ್ಟ್ ಸರಣಿಗಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರೂ ಆಡುವ ಅವಕಾಶ ಪಡೆಯದ ಗಿಲ್ 142 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 10 ಬೌಂಡರಿಗಳನ್ನು ಗಳಿಸಿ ಲಿಸ್ಟ್ ‘ಎ’ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಚಂಡ ಫಾರ್ಮ್‌ನ್ನು 50 ಓವರ್‌ಗಳ ಕ್ರಿಕೆಟ್‌ಗೂ ವಿಸ್ತರಿಸಿದ ಅಗರ್ವಾಲ್‌ರ 111 ಎಸೆತಗಳ ಇನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಇತ್ತು.
ಗಿಲ್ ಹಾಗೂ ಮಾಯಾಂಕ್ ದ್ವಿಶತಕದ ಜೊತೆಯಾಟ ನಡೆಸಿದ ಬಳಿಕ ಸೂರ್ಯಕುಮಾರ್ ತಾನೇಕೆ ಅಪಾಯಕಾರಿ ಏಕದಿನ ಕ್ರಿಕೆಟಿಗ ಎನ್ನುವುದನ್ನು ತೋರಿಸಿಕೊಟ್ಟರು. ಮುಂಬೈ ಬ್ಯಾಟ್ಸ್‌ಮನ್ ಕುಮಾರ್ ಕೇವಲ 29 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಸಿಡಿಸುವುದರೊಂದಿಗೆ ಭಾರತ ‘ಸಿ’ ತಂಡದ ಇನಿಂಗ್ಸ್‌ಗೆ ಪರಿಪೂರ್ಣ ಅಂತ್ಯ ಹಾಡಿದರು.