ಮೊದಲ ಟ್ವೆಂಟಿ-20: ಇಂಗ್ಲೆಂಡ್ ಗೆ ಜಯ
ಕ್ರೈಸ್ಟ್‌ಚರ್ಚ್, ನ.1: ಜೇಮ್ಸ್ ವಿನ್ಸಿ ಅವರ ಚೊಚ್ಚಲ ಅರ್ಧಶತಕದ ಸಹಾಯದಿಂದ ಇಂಗ್ಲೆಂಡ್ ತಂಡ ನ್ಯೂಝಿಲ್ಯಾಂಡ್ ವಿರುದ್ಧ ಶುಕ್ರವಾರ ನಡೆದ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಏಳು ವಿಕೆಟ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ.
ಗೆಲ್ಲಲು 154 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ಸರ್ವಾಧಿಕ ಸ್ಕೋರ್(59) ಗಳಿಸಿದ ವಿನ್ಸಿ ನೆರವಿನಿಂದ 18.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಆಕರ್ಷಕ ಪ್ರದರ್ಶನ ನೀಡಿದ ವಿನ್ಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ರನ್ ಚೇಸಿಂಗ್ ವೇಳೆ ಇಂಗ್ಲೆಂಡ್ ತಂಡ ಆರಂಭಿಕ ಆಟಗಾರ ಡೇವಿಡ್ ಮಲಾನ್(11) ವಿಕೆಟನ್ನು ಬೇಗನೆ ಕಳೆದುಕೊಂಡಿತು. ಇನ್ನೋರ್ವ ಆರಂಭಿಕ ಬ್ಯಾಟ್ಸ್‌ಮನ್ ಜಾನಿ ಬೈರ್ ಸ್ಟೋವ್ 35 ರನ್(28ಎಸೆತ)ಗಳಿಸಿ ವಿಕೆಟ್ ಒಪ್ಪಿಸಿದರು. ಆಗ ಜೊತೆಯಾದ ವಿನ್ಸಿ ಹಾಗೂ ಮೊರ್ಗನ್ ಮೂರನೇ ವಿಕೆಟ್‌ಗೆ 54 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಆತಿಥೇಯರನ್ನು 5 ವಿಕೆಟ್ ನಷ್ಟಕ್ಕೆ 153 ರನ್‌ಗೆ ನಿಯಂತ್ರಿಸಿ ಗೆಲುವಿನ ವೇದಿಕೆ ನಿರ್ಮಿಸಿದ್ದ ಇಂಗ್ಲೆಂಡ್‌ನ ಬೌಲರ್‌ಗಳನ್ನು ನಾಯಕ ಮೊರ್ಗನ್ ಶ್ಲಾಘಿಸಿದರು. ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್(3-23) ಮೂರು ವಿಕೆಟ್‌ಗಳನ್ನು ಪಡೆದರೂ ಕಿವೀಸ್‌ಗೆ ಗೆಲುವು ತಂದುಕೊಡಲು ವಿಫಲರಾದರು. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿವೀಸ್ ದಾಂಡಿಗರು ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಕಿವೀಸ್‌ನ ಪರ ರಾಸ್ ಟೇಲರ್(44, 35 ಎಸೆತ, 3 ಬೌಂಡರಿ, 1 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಸೆಫರ್ಟ್(32)ಹಾಗೂ ಮಿಚೆಲ್(ಔಟಾಗದೆ 30)ಎರಡಂಕೆಯ ಸ್ಕೋರ್ ಗಳಿಸಿದರು.
ವಿಶ್ವಕಪ್ ಜಯಿಸಿದ ಬಳಿಕ ಆ್ಯಶಸ್ ಸರಣಿಯನ್ನು ಉಳಿಸಿಕೊಳ್ಳಲು ವಿಫಲವಾಗಿದ್ದ ಇಂಗ್ಲೆಂಡ್‌ನ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು. ಆದರೆ, ಮೊದಲ ಪಂದ್ಯದಲ್ಲಿ ಹಿರಿಯ ಆಟಗಾರರ ಅನುಪಸ್ಥಿತಿ ತಂಡಕ್ಕೆ ಕಾಡಲಿಲ್ಲ. ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಕಿವೀಸ್‌ನ ಖಾಯಂ ನಾಯಕ ಕೇನ್ ವಿಲಿಯಮ್ಸನ್ ಸರಣಿಯಿಂದ ಹೊರಗುಳಿದಿದ್ದರು. ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಬೌಲರ್ ಟಿಮ್ ಸೌಥಿ ತಂಡವನ್ನು ನಾಯಕನಾಗಿ ಮುನ್ನಡೆಸಿದರು.
ಜುಲೈನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೆಣಸಾಡಿದ ಬಳಿಕ ಮೊದಲ ಬಾರಿ ಉಭಯ ತಂಡಗಳು ಮುಖಾಮುಖಿಯಾದವು. ವಿಶ್ವಕಪ್ ಫೈನಲ್ ಪಂದ್ಯದ ಸ್ಕೋರ್ ಟೈ ಆಗಿದ್ದು, ಹೆಚ್ಚು ಬೌಂಡರಿಗಳನ್ನು ಬಾರಿಸಿದ ಆಧಾರದಲ್ಲಿ ಇಂಗ್ಲೆಂಡ್ ಜಯಶಾಲಿಯಾಗಿತ್ತು.
ಇದೀಗ ಉಭಯ ತಂಡಗಳು ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್ ತಯಾರಿಯತ್ತ ಚಿತ್ತಹರಿಸಿವೆ. ಇಂಗ್ಲೆಂಡ್ ವಿಶ್ವ ರ್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನದಲ್ಲಿದೆ. ನ್ಯೂಝಿಲ್ಯಾಂಡ್ ಆರನೇ ಸ್ಥಾನದಲ್ಲಿದೆ.