ಲಂಕಾ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿದ ಆಸೀಸ್
►ಮುಂದುವರಿದ ವಾರ್ನರ್ ಅಬ್ಬರ
►ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಡೇವಿಡ್ ವಾರ್ನರ್
ಮೆಲ್ಬೋರ್ನ್,ನ.1: ಸತತ ಮೂರನೇ ಅರ್ಧಶತಕ ಸಿಡಿಸಿದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಸಹಾಯದಿಂದ ಆತಿಥೇಯ ಆಸ್ಟ್ರೇಲಿಯ ತಂಡ ಶ್ರೀಲಂಕಾ ವಿರುದ್ಧದ ಮೂರನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು ಏಳು ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿದೆ.
ಆತಿಥೇಯ ತಂಡ ಸರಣಿಯುದ್ದಕ್ಕೂ ಪ್ರಾಬಲ್ಯ ಮೆರೆದಿದ್ದು ಅಡಿಲೇಡ್‌ನಲ್ಲಿ ನಡೆದ ಮೊದಲ ಪಂದ್ಯವನ್ನು 134 ರನ್‌ಗಳಿಂದ ಅಂತರದಿಂದಲೂ, ಬ್ರಿಸ್ಬೇನ್‌ನಲ್ಲಿ ನಡೆದ 2ನೇ ಪಂದ್ಯವನ್ನು 9 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು.
ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ಕುಶಾಲ್ ಪೆರೇರ ಅರ್ಧಶತಕದ(57)ಕೊಡುಗೆಯ ಹೊರತಾಗಿಯೂ 6 ವಿಕೆಟ್‌ಗಳ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರೆ, ಲಸಿತ್ ಮಾಲಿಂಗ ನೇತೃತ್ವದ ಲಂಕಾ ಬೌಲರ್‌ಗಳು ಬಲಿಷ್ಠ ಬ್ಯಾಟಿಂಗ್ ಸರದಿ ಹೊಂದಿರುವ ಆಸ್ಟ್ರೇಲಿಯಕ್ಕೆ ಸರಿಸಾಟಿಯಾಗಲು ವಿಫಲರಾದರು. ಸರಣಿಯ ಮೂರು ಇನಿಂಗ್ಸ್‌ಗಳಲ್ಲಿ 217 ರನ್ ಕಲೆ ಹಾಕಿದ್ದ ವಾರ್ನರ್ ಸಿಂಹಳೀಯರಿಗೆ ಸರಣಿಯುದ್ದಕ್ಕೂ ಸಿಂಹಸ್ವಪ್ನರಾದರು. ಗೆಲ್ಲಲು 143 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಕ್ಕೆ ಆ್ಯರೊನ್ ಫಿಂಚ್(37) ಹಾಗೂ ವಾರ್ನರ್(ಔಟಾಗದೆ 57, 50 ಎಸೆತ, 4 ಬೌಂಡರಿ, 1 ಸಿಕ್ಸರ್)ಮೊದಲ ವಿಕೆಟ್ ಜೊತೆಯಾಟದಲ್ಲಿ 69 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಸ್ಟೀವ್ ಸ್ಮಿತ್ 9 ಎಸೆತಗಳಲ್ಲಿ 13 ರನ್ ಗಳಿಸಿ ಪ್ರದೀಪ್‌ಗೆ ವಿಕೆಟ್ ಒಪ್ಪಿಸಿದರು.
ಮೊದಲೆರಡು ಪಂದ್ಯಗಳಲ್ಲಿ ಔಟಾಗದೆ 100 ಹಾಗೂ ಔಟಾಗದೆ 60 ರನ್ ಗಳಿಸಿದ್ದ ವಾರ್ನರ್ 44 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಔಟಾಗದೆ 57 ರನ್ ಗಳಿಸಿದ ವಾರ್ನರ್ ಅವರು ಅಶ್ಟನ್ ಟರ್ನರ್(22) ಜೊತೆಗೂಡಿ ಇನ್ನೂ 14 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಮುಂದಿನ ವರ್ಷ ಸ್ವದೇಶದಲ್ಲಿ ನಡೆಯುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ವೇಳೆ ನಂ.1 ಟ್ವೆಂಟಿ-20 ತಂಡ ಎನಿಸಿಕೊಳ್ಳುವ ಗುರಿ ಹೊಂದಿರುವ ಆಸ್ಟ್ರೇಲಿಯ ಇದೀಗ ಲಂಕಾ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದೆ.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮೆಂಡಿಸ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ನಿರೊಶನ್ ಡಿಕ್ವೆಲ್ಲಾ ಮೊದಲ ಓವರ್‌ನಲ್ಲಿ ತಾನೆದುರಿಸಿದ ಮೊದಲ ಎಸೆತದಲ್ಲೇ ಔಟಾದರು. ಪೆರೇರ ಹಾಗೂ ಅವಿಷ್ಕಾ ಫೆರ್ನಾಂಡೊ(20) 3ನೇ ವಿಕೆಟ್‌ಗೆ 43 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಲು ಯತ್ನಿಸಿದರು. ಒಶಾಡಾ ಫೆರ್ನಾಂಡೊ ಆರು ರನ್‌ಗೆ ಔಟಾದರು.
ಈ ಮಧ್ಯೆ ಪೆರೇರ 38 ಎಸೆತಗಳಲ್ಲಿ 6ನೇ ಟ್ವೆಂಟಿ-20 ಅರ್ಧಶತಕ ಸಿಡಿಸಿದರು. 57 ರನ್(45 ಎಸೆತ, 4 ಬೌಂಡರಿ,1 ಸಿಕ್ಸರ್)ಗಳಿಸಿ ಕಮಿನ್ಸ್ ಬೌಲಿಂಗ್‌ನಲ್ಲಿ ಟರ್ನರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆಸೀಸ್ ಪರವಾಗಿ ಸ್ಟಾರ್ಕ್(2-32), ರಿಚರ್ಡ್‌ಸನ್(2-25), ಕಮಿನ್ಸ್(2-23) ತಲಾ ಎರಡು ವಿಕೆಟ್ ಪಡೆದರು.