ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ

Update: 2019-11-02 14:00 GMT

ಮಂಗಳೂರು, ನ.2: ಶಕ್ತಿನಗರದ ಶ್ರೀ ಗೋಪಾಲಕೃಷ್ಣ ಪ್ರಿ ಸ್ಕೂಲ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜಿನ ವತಿಯಿಂದ ಶುಕ್ರವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಧನಂಜಯ ಕುಂಬ್ಳೆ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕನ್ನಡ ಕೇವಲ ಭಾಷೆಯಲ್ಲ. ಅದು ಕನ್ನಡಿಗರ ಸಂಸ್ಕೃತಿ, ಸಂಸ್ಕಾರ. ಅದನ್ನು ಬಳಸಿ, ಬೆಳೆಸಿ, ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಅಂತಹ ಜೀವ ಧ್ವನಿ ಕನ್ನಡ ಭಾಷೆಯ ಬಗ್ಗೆ ಇಂದಿನ ಯುವ ಜನಾಂಗಕ್ಕೆ ಒಲವು ಅಭಿಮಾನ ಇರಬೇಕು ಎಂದರು.

ಇಂದು ದೇಶಾದಾದ್ಯಂತ ಆವರಿಸುವ ಅನ್ಯ ಭಾಷೆ ಹಾಗೂ ಸಂಸ್ಕೃತಿಯ ದಾಳಿ ನಮ್ಮ ಕನ್ನಡ ಭಾಷೆ ಸಂಸ್ಕೃತಿಯ ಮೇಲೆ ತನ್ನ ಪ್ರಭಾವ ಬೀರಿದೆ. ಈ ನಿಟ್ಟಿನಲ್ಲಿ ಕನ್ನಡಿಗರು ಮಾತೃ ಭಾಷೆಗೆ ಗೌರವ ನೀಡಿ ಅದಕ್ಕೆ ಮೊದಲ ಆದ್ಯತೆ ನೀಡಬೇಕಿದೆ ಎಂದರು.

ಕನ್ನಡ ಭಾಷೆಯು ಲಿಪಿಗಳ ರಾಣಿ. ಅಂತಹ ಸುಂದರ ಅಕ್ಷರ ಈ ಭಾಷೆಯಲ್ಲಿದೆ. ನಮ್ಮ ನೆರೆಯ ಕಾಸರಗೋಡಿನ ಪರಿಸ್ಥಿತಿ ನೋಡಿದರೆ ಕನ್ನಡ ನಿರ್ನಾಮವಾಗುವ ಸ್ಥಿತಿಗೆ ತಲುಪಿರುವುದು ನೋವಿನ ವಿಚಾರ ಎಂದು ಬೇಸರ ವ್ಯಕ್ತಪಡಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ರಾಜ್ಯೋತ್ಸವ ಸಂದೇಶವನ್ನು ನೀಡಿದರು.

ಈ ಸಂದರ್ಭ ವಿದ್ಯಾರ್ಥಿಗಳು ಕನ್ನಡ ಗಾಯನ ಹಾಗೂ ನೃತ್ಯ ಕಾರ್ಯಕ್ರಮ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ.ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯೆ ಸುಗಣ ಸಿ. ನಾಯ್ಕೆ, ಪ್ರಧಾನ ಸಲಹೆಗಾರ ರಮೇಶ್ ಕೆ, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪಪೂ ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ.ಎಸ್., ಶ್ರೀ ಗೋಪಾಲಕೃಷ್ಣ ಪ್ರಿ ಸ್ಕೂಲ್ ಸಂಚಾಲಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.

ಶಿಕ್ಷಕಿಯರಾದ ಅಕ್ಷತಾ ಸ್ವಾಗತಿಸಿದರೆ ಶಶಿಕಲಾ ಎಂ.ಎನ್. ಕಾರ್ಯಕ್ರಮ ನಿರೂಪಿಸಿದರು. ಶ್ರೀನಿಧಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News