ಅಕ್ಷರ್ ಪಟೇಲ್, ಮಾಯಾಂಕ್ ಮಾರ್ಕಂಡೆ ಸಾಹಸ: ಭಾರತ ‘ಬಿ’ ತಂಡವನ್ನು ಮಣಿಸಿದ ಭಾರತ ‘ಸಿ’

Update: 2019-11-02 18:25 GMT

ರಾಂಚಿ, ನ.2: ಆಲ್‌ರೌಂಡರ್ ಅಕ್ಷರ್ ಪಟೇಲ್ ಅರ್ಧಶತಕ(98 ರನ್, 61 ಎಸೆತ)ಹಾಗೂ ಲೆಗ್ ಸ್ಪಿನ್ನರ್ ಮಾಯಾಂಕ್ ಮಾರ್ಕಂಡೆ(4-25) ನಾಲ್ಕು ವಿಕೆಟ್‌ಗಳ ಗೊಂಚಲು ನೆರವಿನಿಂದ ಭಾರತ ‘ಸಿ’ ತಂಡ ಶನಿವಾರ ಇಲ್ಲಿ ನಡೆದ ದೇವಧರ್ ಟ್ರೋಫಿ ಏಕದಿನ ಟೂರ್ನಿಯ ಮೂರನೇ ಹಾಗೂ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ‘ಬಿ’ ತಂಡವನ್ನು 136 ರನ್‌ಗಳ ಅಂತರದಿಂದ ಮಣಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ‘ಸಿ’ ತಂಡ ಅಕ್ಷರ್ ಪಟೇಲ್ ಹಾಗೂ ವಿರಾಟ್ ಸಿಂಗ್(76 ರನ್,96 ಎಸೆತ)ಅರ್ಧಶತಕಗಳ ಕೊಡುಗೆಯ ನೆರವಿನಿಂದ 5 ವಿಕೆಟ್‌ಗಳ ನಷ್ಟಕ್ಕೆ 280 ರನ್ ಗಳಿಸಿತು. ಗೆಲ್ಲಲು 281 ರನ್ ಗುರಿ ಬೆನ್ನಟ್ಟಿದ ಭಾರತ ‘ಬಿ’ ತಂಡವನ್ನು 43.4 ಓವರ್‌ಗಳಲ್ಲಿ 144 ರನ್‌ಗಳಿಗೆ ನಿಯಂತ್ರಿಸಿದ ಭಾರತ ‘ಸಿ’ಭರ್ಜರಿ ಗೆಲುವು ದಾಖಲಿಸಿತು.

ಪರಾಜಿತ ಭಾರತ ‘ಬಿ’ ತಂಡದ ಪರ ಬಾಬಾ ಅಪರಾಜಿತ್ ಸರ್ವಾಧಿಕ ಸ್ಕೋರ್(53 ರನ್, 90 ಎಸೆತ, 5 ಬೌಂಡರಿ)ಗಳಿಸಿದರು. ಆದರೆ, ಅವರಿಗೆ ಮತ್ತೊಂದು ಕಡೆಯಿಂದ ಸರಿಯಾದ ಸಾಥ್ ಸಿಗಲಿಲ್ಲ. ಭಾರತ ‘ಬಿ‘ ಹಾಗೂ ಭಾರತ ‘ಸಿ’ ತಂಡಗಳು ಈಗಾಗಲೇ ಫೈನಲ್‌ಗೆ ಅರ್ಹತೆ ಪಡೆದಿವೆ. ಸೋಮವಾರ ರಾಂಚಿಯಲ್ಲಿ ನಡೆಯುವ ಫೈನಲ್‌ನಲ್ಲಿ ಈ ಎರಡು ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿವೆ.

ಗೆಲ್ಲಲು ಕಠಿಣ ಗುರಿ ಪಡೆದ ಭಾರತ ‘ಬಿ’ ತಂಡದ ಬ್ಯಾಟ್ಸ್‌ಮನ್‌ಗಳು ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರು. ಆರಂಭಿಕ ಆಟಗಾರರಾದ ಋತುರಾಜ್ ಗಾಯಕ್ವಾಡ್(20) ಹಾಗೂ ಯಶಸ್ವಿ ಜೈಸ್ವಾಲ್(28)ಕ್ರಮವಾಗಿ ದಿವೇಶ್ ಪಥಾನಿಯ ಹಾಗೂ ಜಲಜ್ ಸಕ್ಸೇನಾಗೆ ವಿಕೆಟ್ ಒಪ್ಪಿಸಿದರು. ಆಗ ಭಾರತ ‘ಬಿ’ ಸ್ಕೋರ್ 74ಕ್ಕೆ2.

ಭಾರತ ‘ಬಿ’ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ಕೇದಾರ್ ಜಾಧವ್(5), ನಿತೀಶ್ ರಾಣಾ(1), ಪಾರ್ಥಿವ್ ಪಟೇಲ್(1), ವಿಜಯ ಶಂಕರ್(9) ಹಾಗೂ ಅನುಕೂಲ್ ರಾಯ್(1)ಎರಡಂಕೆಯ ಸ್ಕೋರ್ ಗಳಿಸಲು ವಿಫಲರಾದರು. ಶಹಬಾಝ್ ನದೀಂ(12) ಬೇಗನೆ ಔಟಾದರು. ಏಕಾಂಗಿ ಹೋರಾಟ ನೀಡಿದ ಅಪರಾಜಿತ್ 44ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ರೂಶ್ ಕಲಾರಿಯಾ(6) ವಿಕೆಟ್ ಪತನದೊಂದಿಗೆ ಭಾರತ ಬಿ ತಂಡದ ಸವಾಲು ಅಂತ್ಯವಾಯಿತು.

 ಇದಕ್ಕೂ ಮೊದಲು ಭಾರತ ‘ಸಿ’ ತಂಡ ನಿಧಾನಗತಿಯ ಆರಂಭ ಪಡೆದಿದ್ದು, 13.1 ಓವರ್‌ಗಳಲ್ಲಿ 54 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕ ಶುಭಮನ್ ಗಿಲ್(1)ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ವಿಜಯ ಶಂಕರ್‌ಗೆ ವಿಕೆಟ್ ಒಪ್ಪಿಸಿದರು. ಪ್ರಿಯಾಂ ಗರ್ಗ್(18) ಹಾಗೂ ಅನ್ಮೋಲ್‌ಪ್ರೀತ್ ಸಿಂಗ್(23)ರನ್ನು ಮುಹಮ್ಮದ್ ಸಿರಾಜ್(1-60) ಹಾಗೂ ಎಸ್.ನದೀಂ(2-37)ಕ್ರಮವಾಗಿ 13ನೇ ಹಾಗೂ 14ನೇ ಓವರ್‌ನಲ್ಲಿ ಪೆವಿಲಿಯನ್‌ಗೆ ಕಳುಹಿಸಿದರು.

ಸೂರ್ಯಕುಮಾರ್ ಯಾದವ್(10) ಕೂಡ ಬೇಗನೆ ಔಟಾದರು. ದಿನೇಶ್ ಕಾರ್ತಿಕ್(34)ನಿತೀಶ್ ರಾಣಾಗೆ(1-30)ವಿಕೆಟ್ ಒಪ್ಪಿಸುವುದರೊಂದಿಗೆ ಭಾರತ ಸಿ ತಂಡ 126 ರನ್‌ಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು.

ಆಗ ಜೊತೆಯಾದ ವಿರಾಟ್ ಸಿಂಗ್(ಔಟಾಗದೆ 76, 96 ಎಸೆತ, 3 ಬೌಂಡರಿ, 3 ಸಿಕ್ಸರ್)ಹಾಗೂ ಅಕ್ಷರ್ ಪಟೇಲ್(ಔಟಾಗದೆ 98, 61 ಎಸೆತ, 13 ಬೌಂಡರಿ, 3 ಸಿಕ್ಸರ್)ಆರನೇ ವಿಕೆಟ್ ಜೊತೆಯಾಟದಲ್ಲಿ 112 ಎಸೆತಗಳಲ್ಲಿ 154 ರನ್ ಸೇರಿಸಿ ತಂಡವನ್ನು ಆಧರಿಸಿದರು.

ಭಾರತ ‘ಬಿ’ ತಂಡದ ನಾಯಕ ಪಾರ್ಥಿವ್ ಪಟೇಲ್, ವಿರಾಟ್-ಅಕ್ಷರ್ ಜೋಡಿಯನ್ನು ಬೇರ್ಪಡಿಸಲು 8 ಬೌಲರ್‌ಗಳನ್ನು ದಾಳಿಗಿಳಿಸಿದರೂ ಪ್ರಯೋಜನವಾಗಲಿಲ್ಲ. ಭಾರತ ‘ಬಿ ’ ತಂಡದ ಪರ ಶಹಬಾಝ್ ನದೀಂ(2-37) ಎರಡು ವಿಕೆಟ್‌ಗಳನ್ನು ಕಬಳಿಸಿದರೆ, ವಿಜಯ ಶಂಕರ್(1-18), ಮುಹಮ್ಮದ್ ಸಿರಾಜ್(1-60) ಹಾಗೂ ನಿತೀಶ್ ರಾಣಾ(1-30)ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News