ಪ್ಯಾರಿಸ್ ಮಾಸ್ಟರ್ಸ್: ಜೊಕೊವಿಕ್ ಫೈನಲ್‌ಗೆ, ನಡಾಲ್ ಎದುರಾಳಿ ?

Update: 2019-11-02 18:26 GMT

ಪ್ಯಾರಿಸ್, ನ.2:ಗ್ರಿಗೊರ್ ಡಿಮಿಟ್ರೊವ್‌ರನ್ನು ಮಣಿಸಿದ ನೊವಾಕ್ ಜೊಕೊವಿಕ್ ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಫೈನಲ್‌ನಲ್ಲಿ ಬದ್ಧ ಎದುರಾಳಿ ರಫೆಲ್ ನಡಾಲ್‌ರನ್ನು ಎದುರಿಸುವ ಸಾಧ್ಯತೆಯಿದೆ.

ಅಗ್ರ ಶ್ರೇಯಾಂಕದ ಜೊಕೊವಿಕ್ ಶನಿವಾರ ನಡೆದ ಪುರುಷರ ಸಿಂಗಲ್ಸ್ ನ ಸೆಮಿ ಫೈನಲ್‌ನಲ್ಲಿ ಡಿಮಿಟ್ರೊವ್‌ರನ್ನು 7-6(7/5), 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

32ರ ಹರೆಯದ ಜೊಕೊವಿಕ್ ರವಿವಾರ ನಡೆಯುವ ಫೈನಲ್ ಪಂದ್ಯದಲ್ಲಿ ನಡಾಲ್ ಅಥವಾ ಕೆನಡಾದ ಯುವ ಆಟಗಾರ ಡೆನಿಸ್ ಶಪೊವಾಲೊವ್‌ರನ್ನು ಎದುರಿಸಲಿದ್ದಾರೆ. ಜೊಕೊವಿಕ್ ವೃತ್ತಿಜೀವನದಲ್ಲಿ 50ನೇ ಬಾರಿ ಮಾಸ್ಟರ್ಸ್ ಟೂರ್ನಿಯಲ್ಲಿ ಫೈನಲ್ ತಲುಪಿದರು. ಪ್ಯಾರಿಸ್‌ನಲ್ಲಿ ಆರನೇ ಬಾರಿ ಈ ಸಾಧನೆ ಮಾಡಿದರು.  ಜೊಕೊವಿಕ್ ಲಂಡನ್‌ನಲ್ಲಿ ನ.10ರಿಂದ ಆರಂಭವಾಗುವ ಎಟಿಪಿ ಟೂರ್ ಫೈನಲ್ಸ್‌ಗೆ ಮೊದಲು ಈ ವರ್ಷ ಐದನೇ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ನಡಾಲ್ ಸೆಮಿ ಫೈನಲ್‌ಗೆ: ಪ್ಯಾರಿಸ್‌ನಲ್ಲಿ ಶುಕ್ರವಾರ ನಡೆದ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ 33ರ ಹರೆಯದ ನಡಾಲ್ ಫ್ರಾನ್ಸ್‌ನ ಜೋ ವಿಲ್ಫ್ರೆಡ್ ಸೋಂಗರನ್ನು 7-6(7/4), 6-1 ಸೆಟ್‌ಗಳ ಅಂತರದಿಂದ ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದರು. ನಡಾಲ್ ಇದೀಗ ಮಾಸ್ಟರ್ಸ್ ಟೂರ್ನಿಯಲ್ಲಿ 73ನೇ ಬಾರಿ ಸೆಮಿ ಫೈನಲ್‌ಗೆ ತೇರ್ಗಡೆಯಾಗಿದ್ದಾರೆ. 85ನೇ ಎಟಿಪಿ ಪ್ರಶಸ್ತಿ ಗೆಲ್ಲುವುದರಿಂದ ಕೇವಲ ಎರಡು ಹೆಜ್ಜೆ ಹಿಂದಿದ್ದಾರೆ.

ದಾಖಲೆ 36ನೇ ಮಾಸ್ಟರ್ಸ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ನಡಾಲ್ ಅಂತಿಮ ನಾಲ್ಕರ ಸುತ್ತಿನಲ್ಲಿ ಕೆನಡಾದ ಡೆನಿಸ್ ಶಪೊವಾಲೊವ್‌ರನ್ನು ಎದುರಿಸಲಿದ್ದಾರೆ. ಕೆನಡಾದ ಯುವ ಆಟಗಾರ ಶಪೊವಾನೊವ್ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಗಾಯೆಲ್ ಮೊನ್‌ಫಿಲ್ಸ್ ರನ್ನು 6-2, 6-2 ನೇರ ಸೆಟ್‌ಗಳಿಂದ ಮಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News