ಸರ್ವರ್ ಸಮಸ್ಯೆ ಸುಧಾರಿಸಿದಾಗ ಸಿಬ್ಬಂದಿ ಕೊರತೆ: ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಶನಿವಾರವೂ ಪರದಾಡಿದ ಗ್ರಾಹಕರು

Update: 2019-11-02 18:31 GMT

ಉಪ್ಪಿನಂಗಡಿ: ಸರಕಾರಿ ಸ್ವಾಮ್ಯದ ಸಿಂಡಿಕೇಟ್ ಬ್ಯಾಂಕಿನ ಉಪ್ಪಿನಂಗಡಿ ಶಾಖೆಯ ಸ್ಥಿತಿ ಗ್ರಹಣ ಬಡಿದಂತಾಗಿದ್ದು, ಕಳೆದ ಹದಿನೈದು ದಿನಗಳಿಂದ ಸರ್ವರ್ ಸಮಸ್ಯೆಯಿಂದಾಗಿ ಗ್ರಾಹಕರಿಗೆ ಸೇವೆ ನೀಡಲು ಅಸಾಧ್ಯವಾದ ಘಟನೆ ನಡೆದರೆ, ಶನಿವಾರ ಸಿಬ್ಬಂದಿ ಕೊರತೆಯಿಂದ ಗ್ರಾಹಕರು ಸೇವೆ ದೊರೆಯದೆ ಪರದಾಡುವ ಸ್ಥಿತಿ ಎದುರಾಗಿತ್ತು.

ಈಗಾಗಲೇ ವಿಲೀನ ಪ್ರಕ್ರಿಯೆಗೆ ತುತ್ತಾಗಿರುವ ಸಿಂಡಿಕೇಟ್ ಬ್ಯಾಂಕಿನ  ಉಪ್ಪಿನಂಗಡಿ ಶಾಖೆ ಅದರ ಪೂರ್ವ ಇತಿಹಾಸದಿಂದಲೂ ಗ್ರಾಹಕರಿಗೆ ಅಪ್ರಿಯ  ಸೇವೆ ಒದಗಿಸುವಲ್ಲಿ ಹೆಸರುವಾಸಿಯಾಗಿದೆ. ಕಳೆದ ಹದಿನೈದು ದಿನಗಳಿಂದ ಸರ್ವರ್ ಸಮಸ್ಯೆ, ಇಂಟರ್ ನೆಟ್ ಸಮಸ್ಯೆ ಎಂದೆಲ್ಲಾ ನೆಪವೊಡ್ಡಿ ಯಾವುದೇ ವ್ಯವಹಾರ ಅಸಾಧ್ಯವೆಂದು ಅಸಹಾಯಕತೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಿಂಡಿಕೇಟ್ ಬ್ಯಾಂಕೊಂದನ್ನೇ ನಂಬಿದ್ದ ಗ್ರಾಹಕರು ತಮ್ಮ ತಮ್ಮ ವ್ಯವಹಾರಗಳಲ್ಲಿ ನಷ್ಟ ಕಾಣುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಸರ್ವರ್ ಸಮಸ್ಯೆ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ ಎಂದಾಕ್ಷಣ ನ.1ರ ಶುಕ್ರವಾರದಂದು ಕನ್ನಡ ರಾಜ್ಯೋತ್ಸವದ ರಜೆ ಬಂತು. ಆದರೆ ನ.2ರ ಶನಿವಾರ ತಿಂಗಳ ಮೊದಲ ಶನಿವಾರ ಆಗಿರುವುದರಿಂದ ದಿನವಿಡೀ ಗ್ರಾಹಕರ ಸೇವೆ ಬ್ಯಾಂಕ್ ಒದಗಿಸಬೇಕಾಗಿತ್ತು. ಆದರೆ  ಬ್ಯಾಂಕಿನ ಬಹುತೇಕ ಸಿಬ್ಬಂದಿ ಹೊರ ರಾಜ್ಯದವರಾಗಿದ್ದರಿಂದ ಮರುದಿನ ರವಿವಾರದ ರಜೆಯೂ ಬರುವುದರಿಂದ ಶನಿವಾರವೂ ಹೆಚ್ಚಿನ ಸಿಬ್ಬಂದಿ ಗೈರು ಹಾಜರಾಗಿದ್ದರು. ಇದರಿಂದ ಶನಿವಾರವೂ ಸಿಬ್ಬಂದಿ ಕೊರತೆಯಿಂದ ಗ್ರಾಹಕರು ವ್ಯವಹಾರ ನಡೆಸಲಾಗದೇ ಸಹನೆಯನ್ನು ಕಳೆದುಕೊಳ್ಳುವ ಸ್ಥಿತಿ ಎದುರಾಯಿತು.

ಇಲ್ಲಿ ಮಾತ್ರ ಸಮಸ್ಯೆಯಾಕೆ?:  ಉಪ್ಪಿನಂಗಡಿಯಲ್ಲಿ ಅತೀ ಹೆಚ್ಚು  ಗ್ರಾಹಕರನ್ನು ಹೊಂದಿರುವ ಸಿಂಡಿಕೇಟ್  ಬ್ಯಾಂಕ್ ಗ್ರಾಹಕರಿಗೆ ಕಳಪೆ ಸೇವೆ ನೀಡುತ್ತಿದ್ದು, ಸೇವೆಪಡೆಯಲು ಬರುವ ಗ್ರಾಮೀಣ ಭಾಗದ ಜನತೆ ದಿನವಿಡೀ ಬ್ಯಾಂಕಿನಲ್ಲಿ ಕಾಯುವಂತಾಗಿದೆ. ಇದರಿಂದ ಗ್ರಾಹಕರು ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.  ಉಳಿದೆಲ್ಲಾ  ಬ್ಯಾಂಕ್‌ಗಳಿಗೆ ಇಲ್ಲದ ಸಮಸ್ಯೆ ಸಿಂಡಿಕೇಟ್ ಬ್ಯಾಂಕಿಗೆ ಮಾತ್ರ ಯಾಕೆ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದು ಬ್ಯಾಂಕಿನ ಗ್ರಾಹಕ ರಾಜಾರಾಮ ಪತ್ರಿಕೆಯೊಂದಿಗೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News