ಮಧ್ಯಪ್ರದೇಶ ಬಿಜೆಪಿಗೆ ಮತ್ತೊಂದು ಆಘಾತ

Update: 2019-11-03 05:08 GMT

ಭೋಪಾಲ್, ನ.3: ಅಕ್ರಮ ಮರಳು ಸಾಗಾಟ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮಧ್ಯಪ್ರದೇಶದ ಬಿಜೆಪಿ ಶಾಸಕ ಪ್ರಹ್ಲಾದ್ ಲೋಧಿಗೆ ಎರಡು ವರ್ಷಗಳ ಶಿಕ್ಷೆಯಾಗಿರುವ ಹಿನ್ನೆಲೆಯಲ್ಲಿ ಸ್ಪೀಕರ್ ಎನ್.ಪಿ.ಪ್ರಜಾಪತಿಯವರು ಪವಾಯಿ ಕ್ಷೇತ್ರದ ಶಾಸಕ ಸ್ಥಾನ ತೆರವಾಗಿದೆ ಎಂದು ಘೋಷಿಸಿದ್ದಾರೆ. ಇದರಿಂದ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿಗೆ ಮತ್ತೊಂದು ಆಘಾತ ಎದುರಾಗಿದೆ.

"ವಿಶೇಷ ನ್ಯಾಯಾಲಯದಿಂದ ಆದೇಶದ ಪ್ರಮಾಣಿತ ಪ್ರತಿಯನ್ನು ಸ್ವೀಕರಿಸಿದ ಬಳಿಕ ಈ ವಿಧಾನಸಭಾ ಕ್ಷೇತ್ರ ತೆರವಾಗಿರುವ ಸಂಬಂಧ ಆದೇಶ ಹೊರಡಿಸಲಾಗಿದೆ. ಇದನ್ನು ಗಜೆಟ್ ಅಧಿಸೂಚನೆಗೆ ಕಳುಹಿಸಲಾಗಿದ್ದು, ವಿಧಾನಸಭೆಯಲ್ಲಿ ಈ ಕ್ಷೇತ್ರ ತೆರವಾಗಿರುವ ಬಗ್ಗೆ ಚುನಾವಣಾ ಆಯೋಗಕ್ಕೂ ಮಾಹಿತಿ ನೀಡಲಾಗಿದೆ" ಎಂದು ಪ್ರಜಾಪತಿ ಹೇಳಿದ್ದಾರೆ.

ಸದ್ಯ ಜಾಮೀನಿನ ಮೇಲಿರುವ ಲೋಧಿ, ಸ್ಪೀಕರ್ ಕ್ರಮವನ್ನು ಸರ್ವಾಧಿಕಾರಿ ಧೋರಣೆ ಎಂದು ಬಣ್ಣಿಸಿದ್ದಾರೆ. "ನ್ಯಾಯಾಂಗದ ಮೇಲೆ ನನಗೆ ನಂಬಿಕೆ ಇದ್ದು, ಹೈಕೋರ್ಟ್ ಮೊರೆ ಹೋಗುತ್ತೇನೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಯಾವುದೇ ಸಂಸದ, ಶಾಸಕ ಅಥವಾ ವಿಧಾನ ಪರಿಷತ್ ಸದಸ್ಯರಿಗೆ ಕನಿಷ್ಠ ಎರಡು ವರ್ಷ ಜೈಲು ಶಿಕ್ಷೆಯಾದರೆ ಆ ಆರೋಪಿ ತಕ್ಷಣದಿಂದಲೇ ಶಾಸನಸಭೆಯ ಸದಸ್ಯತ್ವ ಕಳೆದುಕೊಳ್ಳುತ್ತಾನೆ ಎಂದು 2013ರ ಜುಲೈನಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಅನ್ವಯ, ಲೋಧಿ ತಲೆ ಮೇಲೆ ಇದೀಗ ಅನರ್ಹತೆಯ ತೂಗುಗತ್ತಿ ನೇತಾಡುತ್ತಿದೆ. ಸ್ಪೀಕರ್ ತಮ್ಮ ನಿರ್ಧಾರಕ್ಕೆ ಈ ತೀರ್ಪನ್ನು ಉಲ್ಲೇಖಿಸಿದ್ದಾರೆ. ಇಂಥ ಶಿಕ್ಷೆಯಾದ ತಕ್ಷಣ ಜನಪ್ರತಿನಿಧಿ ಅನರ್ಹನಾಗುತ್ತಾನೆ ಎಂದು ಪ್ರತಿಪಾದಿಸಿದ್ದಾರೆ.

ಸುಪ್ರೀಂ ತೀರ್ಪು ಆಧಾರದಲ್ಲಿ ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಒಂಬತ್ತು ರಾಜಕಾರಣಿಗಳು ದೇಶಾದ್ಯಂತ ತಮ್ಮ ಸದಸ್ಯತ್ವ ಕಳೆದುಕೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ 2013ರ ನವೆಂಬರ್‌ನಲ್ಲಿ ಬಿಜೆಪಿ ಶಾಸಕಿ ಆಶಾರಾಣಿ ಸಿಂಗ್ ಅವರ ಮನೆಕೆಲಸದಾಕೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕಿ ಹಾಗೂ ಆಕೆಯ ಪತಿಗೆ 10 ವರ್ಷ ಜೈಲು ಶಿಕ್ಷೆಯಾದ ಹಿನ್ನೆಲೆಯಲ್ಲಿ ಶಾಸಕತ್ವದಿಂದ ಅನರ್ಹರಾಗಿದ್ದರು.

ಇದೀಗ ಚೆಂಡು ಚುನಾವಣಾ ಆಯೋಗದ ಕೋರ್ಟ್‌ನಲ್ಲಿದ್ದು, ಲೋಧಿ ಅನರ್ಹರಾದರೆ, ಮಧ್ಯಪ್ರದೇಶ ವಿಧಾನಸಭೆಯಲ್ಲಿ ಪವಾಯಿ ಕ್ಷೇತ್ರದ ಉಪಚುನಾವಣೆ ವರೆಗೆ ಕಾಂಗ್ರೆಸ್ ಬಹುಮತ ಹೊಂದಿರುತ್ತದೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಝಬೂವಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಾಂತಿಲಾಲ್ ಭೂರಿಯಾ ಗೆಲುವಿನೊಂದಿಗೆ ಕಾಂಗ್ರೆಸ್ ಸದಸ್ಯಬಲ 115ಕ್ಕೇರಿದೆ. ಲೋಧಿ ಸದಸ್ಯತ್ವ ಕಳೆದುಕೊಂಡರೆ, ಸದನದ ಒಟ್ಟು ಸದಸ್ಯಬಲ 229 ಆಗಲಿದ್ದು, ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸಲಿದೆ. ಬಿಜೆಪಿ 108 ಶಾಸಕರನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News