ಆಘಾತಕಾರಿ: ಒಂದು ವರ್ಷದಲ್ಲಿ ಕ್ಯಾನ್ಸರ್ ಪ್ರಮಾಣ ಶೇ.324ರಷ್ಟು ಹೆಚ್ಚಳ !

Update: 2019-11-03 04:28 GMT

ಹೊಸದಿಲ್ಲಿ, ನ.3: ದೇಶದಲ್ಲಿ ಬಾಯಿ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್ ಸೇರಿದಂತೆ ದೇಶದ ಎನ್‌ಸಿಡಿ ಕ್ಲಿನಿಕ್‌ಗಳಲ್ಲಿ ಪತ್ತೆಯಾದ ಕ್ಯಾನ್ಸರ್ ರೋಗಿಗಳ ಸಂಖ್ಯೆ 2017-18ರ ಅವಧಿಯಲ್ಲಿ ಶೇ.324ರಷ್ಟು ಹೆಚ್ಚಳವಾಗಿದೆ ಎಂಬ ಆಘಾತಕಾರಿ ಮಾಹಿತಿ ನ್ಯಾಷನಲ್ ಹೆಲ್ತ್ ಪ್ರೊಫೈಲ್-2019 ಅಂಕಿಅಂಶಗಳಿಂದ ಹೊರಬಿದ್ದಿದೆ.

ಸಾಂಕ್ರಾಮಿಕವಲ್ಲದ ರೋಗಗಳ ಕ್ಲಿನಿಕ್‌ಗಳಿಗೆ 2018ರಲ್ಲಿ 6.5 ಕೋಟಿ ಮಂದಿ ತಪಾಸಣೆಗಾಗಿ ಆಗಮಿಸಿದ್ದು, 1.6 ಲಕ್ಷ ಮಂದಿಯಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ. 2017ರಲ್ಲಿ ಪತ್ತೆಯಾದ 39,635 ಕ್ಯಾನ್ಸರ್ ಪ್ರಕರಣಗಳಿಗೆ ಹೋಲಿಸಿದರೆ ಇದು ಶೇಕಡ 324ರಷ್ಟು ಅಧಿಕ ಎಂದು ವರದಿ ಹೇಳಿದೆ.

ಈ ಒಂದು ವರ್ಷದ ಅವಧಿಯಲ್ಲಿ ಎನ್‌ಸಿಡಿ ಕ್ಲಿನಿಕ್‌ಗಳಿಗೆ ಭೇಟಿ ನೀಡಿದ ರೋಗಿಗಳ ಸಂಖ್ಯೆ 3.5 ಕೋಟಿಯಿಂದ 6.6 ಕೋಟಿಗೆ ಹೆಚ್ಚಿದ್ದರೂ, ಒತ್ತಡ, ಆಹಾರ ಕ್ರಮ, ತಂಬಾಕು ಉತ್ಪನ್ನಗಳು ಹಾಗೂ ಆಲ್ಕೋಹಾಲ್ ಸೇವನೆಯಂಥ ಕ್ಷಿಪ್ರ ಜೀವನಶೈಲಿ ಬದಲಾವಣೆ, ರೋಗ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಗುಜರಾತ್‌ನಲ್ಲಿ ಅತ್ಯಧಿಕ ಸಂಖ್ಯೆಯ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ನಂತರದ ಸ್ಥಾನಗಳಲ್ಲಿವೆ. ಗುಜರಾತ್‌ನಲ್ಲಿ 2017ರಲ್ಲಿ 3,939 ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದರೆ, 2018ರಲ್ಲಿ 68,230 ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಅವಧಿಯಲ್ಲಿ ತಪಾಸಣೆಗಾಗಿ ಎನ್‌ಸಿಡಿ ಕ್ಲಿನಿಕ್‌ಗಳಿಗೆ ಭೇಟಿ ನೀಡಿರುವವರಲ್ಲಿ ಆಗಿರುವ ಹೆಚ್ಚಳ ಕೇವಲ ಶೇಕಡ 24. ಅಂತೆಯೇ ಆಂಧ್ರ ಪ್ರದೇಶ ಹಾಗೂ ಉತ್ತರ ಪ್ರದೇಶದಂಥ ರಾಜ್ಯಗಳಲ್ಲೂ ಅತ್ಯಧಿಕ ಪ್ರಮಾಣದ ಹೆಚ್ಚಳ ಕಂಡುಬಂದಿದೆ. ಕರ್ನಾಟಕದಲ್ಲಿ 2017ರಲ್ಲಿ 3,523ರಷ್ಟಿದ್ದ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಒಂದು ವರ್ಷದಲ್ಲಿ 20,084ಕ್ಕೆ ಹೆಚ್ಚಳವಾಗಿದೆ.

"ತಂಬಾಕು ಉತ್ಪನ್ನಗಳ ಬಳಕೆ ಬಾಯಿ ಕ್ಯಾನ್ಸರ್ ಹೆಚ್ಚಳಕ್ಕೆ ಪ್ರಮುಖ ಕರಣವಾಗಿದ್ದು, ಆಲ್ಕೋಹಾಲ್ ಸೇವನೆಯೂ ಸೇರಿದರೆ, ಈ ಅಪಾಯ ಸಾಧ್ಯತೆ ಅತ್ಯಧಿಕ. ಜಡ ಜೀವನಶೈಲಿ ಹಾಗೂ ಹೆಚ್ಚುತ್ತಿರುವ ಬೊಜ್ಜು ಸಮಸ್ಯೆ ಕೂಡಾ ಕ್ಯಾನ್ಸರ್‌ನಂಥ ರೋಗಗಳ ಹೆಚ್ಚಳಕ್ಕೆ ಕಾರಣ ಎಂದು ಆ್ಯಕ್ಷನ್ ಕ್ಯಾನ್ಸರ್ ಆಸ್ಪತ್ರೆಯ ಹಿರಿಯ ಕ್ಯಾನ್ಸರ್ ಸಲಹಾ ತಜ್ಞ ಡಾ.ಹರ್‌ಪ್ರೀತ್ ಸಿಂಗ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News