​ಚಿನ್ಮಯಾನಂದ ಪ್ರಕರಣ: ಕಾನೂನು ವಿದ್ಯಾರ್ಥಿನಿಯ ಕಾಣೆಯಾಗಿದ್ದ ಬ್ಯಾಗ್ ಚರಂಡಿಯಲ್ಲಿ ಪತ್ತೆ

Update: 2019-11-03 04:32 GMT

ಲಕ್ನೋ, ನ.3: ಕೇಂದ್ರ ಮಾಜಿ ಸಚಿವ ಚಿನ್ಮಯಾನಂದ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ, ಕಾನೂನು ವಿದ್ಯಾರ್ಥಿನಿಯ ಹಾಸ್ಟೆಲ್ ಕೊಠಡಿಯಿಂದ ಕಾಣೆಯಾಗಿದ್ದ ಬ್ಯಾಗನ್ನು ಪ್ರಕರಣ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಶಹಜಹಾನ್‌ಪುರ ಚರಂಡಿಯಲ್ಲಿ ಪತ್ತೆ ಮಾಡಿದೆ.

ವಿದ್ಯಾರ್ಥಿನಿ ಹಿಂದೆ ಕಲಿಯುತ್ತಿದ್ದ ಕಾಲೇಜಿನ ಪಕ್ಕದ ಚರಂಡಿಯಲ್ಲಿ ಈ ಬ್ಯಾಗ್ ಪತ್ತೆಯಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಇದೀಗ ಕಾನೂನು ವಿದ್ಯಾರ್ಥಿನಿಯ ಕ್ಯಾಮೆರಾ ಅಳವಡಿಸಿದ ಕನ್ನಡಕಕ್ಕಾಗಿ ಹುಡುಕುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. 72 ವರ್ಷ ವಯಸ್ಸಿನ ಮಾಜಿ ಸಂಸದ ಲೈಂಗಿಕ ಶೋಷಣೆ ನಡೆಸಿದ್ದನ್ನು ಈ ಕ್ಯಾಮೆರಾದಲ್ಲಿ ದಾಖಲು ಮಾಡಿಕೊಳ್ಳಲಾಗಿತ್ತು ಎಂದು ವಿದ್ಯಾರ್ಥಿನಿ ಹೇಳಿಕೆ ನೀಡಿದ್ದಳು.

ಲೈಂಗಿಕ ಕಿರುಕುಳ ಆರೋಪ ಹೊರಿಸಿದ ಮಹಿಳೆ ಮೇಲೆ ಚಿನ್ಮಯಾನಂದ ಹೊರಿಸಿರುವ ಸುಲಿಗೆ ಆರೋಪಕ್ಕೆ ಸಂಬಂಧಿಸಿದಂತೆ ದೂರದಾರ ಮಹಿಳೆಯ ತಂದೆಯನ್ನು ಎಸ್‌ಐಟಿ ವಿಚಾರಣೆಗೆ ಒಳಪಡಿಸಿದ ಮರುದಿನವೇ ಪ್ರಕರಣಕ್ಕೆ ಮಹತ್ವದ ಪುರಾವೆ ಎನಿಸಿದ್ದ ಈ ಬ್ಯಾಗ್ ಪತ್ತೆಯಾಗಿದೆ. ಚಿನ್ಮಯಾನಂದ ನೀಡಿದ ದೂರಿನ ಆಧಾರದಲ್ಲಿ ಲೈಂಗಿಕ ಕಿರುಕುಳ ಆರೋಪ ಹೊರಿಸಿದ ವಿದ್ಯಾರ್ಥಿನಿಯನ್ನೂ ಬಂಧಿಸಲಾಗಿದೆ.

23 ವರ್ಷ ವಯಸ್ಸಿನ ಕಾನೂನು ವಿದ್ಯಾರ್ಥಿನಿ ಆಗಸ್ಟ್ 24ರಂದು, ಸನ್ಯಾಸಿ ಸಮುದಾಯದ ಹಿರಿಯ ಮುಖಂಡರೊಬ್ಬರು ಲೈಂಗಿಕ ಕಿರುಕುಳ ನೀಡಿ ಬೆದರಿಸುತ್ತಿದ್ದಾರೆ ಎಂದು ಆಪಾದಿಸುವ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಬಳಿಕ ನಾಪತ್ತೆಯಾಗಿದ್ದರು. ಆಕೆ ಚಿನ್ಮಯಾನಂದ ಹೆಸರನ್ನು ಹೇಳಿರಲಿಲ್ಲ. ಆದರೆ ಮಗಳು ನಾಪತ್ತೆಯಾಗಿರುವುದಕ್ಕೆ ಚಿನ್ಮಯಾನಂದ ಕಾರಣ ಎಂದು ಆಕೆಯ ತಂದೆ ದೂರು ನೀಡಿದ್ದರು. ಆಕೆ ರಾಜಸ್ಥಾನದಲ್ಲಿ ಪತ್ತೆಯಾಗಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News