ಆರ್‌ ಸಿಇಪಿ ಒಪ್ಪಂದ 2020ಕ್ಕೆ ಮುಂದೂಡಿಕೆ ಸಾಧ್ಯತೆ

Update: 2019-11-03 15:35 GMT

ಬ್ಯಾಂಕಾಕ್, ನ.3: 16 ದೇಶಗಳು ಒಳಗೊಂಡಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ(ಆರ್‌ಸಿಇಪಿ)ಕ್ಕೆ 2020ರಲ್ಲಿ ಚಾಲನೆ ದೊರಕುವ ಸಾಧ್ಯತೆಯಿದೆ ಎಂದು ದಕ್ಷಿಣ ಏಶ್ಯಾದ ಮುಖಂಡರ ಕರಡು ಹೇಳಿಕೆಯಲ್ಲಿ ತಿಳಿಸಲಾಗಿದೆ.

'ಆಸಿಯಾನ್' ಗುಂಪಿನ 10 ರಾಷ್ಟ್ರಗಳ ಜೊತೆ ಚೀನಾ, ಭಾರತ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್ ದೇಶಗಳು ಸೇರಿಕೊಂಡು ವಿಶ್ವದ ಅತ್ಯಂತ ಬೃಹತ್ ಎನ್ನಲಾದ ಆರ್‌ ಸಿಇಪಿ ಒಪ್ಪಂದ ರೂಪಿಸಿವೆ. ವಿಶ್ವದ ಜಿಡಿಪಿಯ ಶೇ.30ರಷ್ಟು ಮತ್ತು ವಿಶ್ವದ ಅರ್ಧಾಂಶದಷ್ಟು ಜನತೆ ಈ ಒಪ್ಪಂದದ ವ್ಯಾಪ್ತಿಯಡಿ ಬರುತ್ತಾರೆ. ಬ್ಯಾಂಕಾಕ್‌ ನಲ್ಲಿ ರವಿವಾರ ನಡೆದ ಸಭೆಯಲ್ಲಿ ಒಪ್ಪಂದದ ಕೆಲವು ಅಂಶಗಳ ಬಗ್ಗೆ ಭಾರತ ಎತ್ತಿರುವ ಆಕ್ಷೇಪದ ಹಿನ್ನೆಲೆಯಲ್ಲಿ ಒಪ್ಪಂದವನ್ನು ಅಂತಿಮಗೊಳಿಸುವ ನಿರೀಕ್ಷೆ ಹುಸಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾರುಕಟ್ಟೆ ಪ್ರವೇಶದ ಕುರಿತ ಬಹುತೇಕ ಸಮಾಲೋಚನೆ ಮುಕ್ತಾಯವಾಗಿದೆ. ಆದರೆ ಕೆಲವು ದ್ವಿಪಕ್ಷೀಯ ವಿಷಯಗಳು ಬಾಕಿ ಇದ್ದು ಫೆಬ್ರವರಿ 2020ಕ್ಕೆ ಅಂತಿಮಗೊಳ್ಳುವ ನಿರೀಕ್ಷೆಯಿದೆ ಎಂದು ರವಿವಾರ ಬ್ಯಾಂಕಾಕ್‌ ನಲ್ಲಿ ನಡೆದ ಸಭೆಯ ಬಳಿಕ ಆಸಿಯಾನ್ ರಾಷ್ಟ್ರಗಳು ಬಿಡುಗಡೆ ಮಾಡಿರುವ ಕರಡು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಒಪ್ಪಂದದ ಬಳಿಕ ಚೀನಾ ನಿರ್ಮಿತ ಕಡಿಮೆ ಬೆಲೆಯ ಸರಕುಗಳು ದೇಶದ ಮಾರುಕಟ್ಟೆಗೆ ಬರುವ ಕಾರಣ ಅಸಂವಹನೀಯ ವ್ಯಾಪಾರ ಕೊರತೆಯ ಪರಿಸ್ಥಿತಿ ನೆಲೆಸಿ ಸಣ್ಣ ಉದ್ದಿಮೆಗಳಿಗೆ ಸಮಸ್ಯೆಯಾಗಬಹುದು ಎಂಬ ಆತಂಕವನ್ನು ಪ್ರಧಾನಿ ನರೇಂದ್ರ ಮೋದಿ ಸಂದರ್ಶನದಲ್ಲಿ ವ್ಯಕ್ತಪಡಿಸಿರುವುದಾಗಿ ‘ಬ್ಯಾಂಕಾಕ್ ಪೋಸ್ಟ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News