ಮೊದಲ ಟ್ವೆಂಟಿ-20: ಬಾಂಗ್ಲಾದ ಗೆಲುವಿಗೆ 149 ರನ್‌ಗಳ ಸವಾಲು
ಹೊಸದಿಲ್ಲಿ, ನ.3: ಬಾಂಗ್ಲಾ ವಿರುದ್ಧ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 148 ರನ್ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ ಆರಂಭಿಕ ಆಘಾತ ಅನುಭವಿಸಿದರೂ, ಬಳಿಕ ಚೇತರಿಸಿಕೊಂಡು ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.
ಆರಂಭಿಕ ಬ್ಯಾಟ್ಸಿಮನ್ ಶಿಖರ್ ಧವನ್(41) ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು.
ಶಿಖರ್ ಧವನ್ ಜೊತೆ ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ (9) ಎರಡು ಬೌಂಡರಿ ಬಾರಿಸಿ ಸ್ಫೋಟಕ ಬ್ಯಾಟಿಂಗ್ ಕಡೆಗೆ ಗಮನ ನೀಡಿದರೂ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಅವರನ್ನು ಶಫಿಯುಲ್ ಇಸ್ಲಾಂ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.
ಶರ್ಮಾ ನಿರ್ಗಮದ ಬಳಿಕ ಕ್ರೀಸ್‌ಗೆ ಆಗಮಿಸಿದ ಲೋಕೇಶ್ ರಾಹುಲ್(15) ಎರಡಂಕೆಯ ಸ್ಕೋರ್ ದಾಖಲಿಸಿ ಅನಿಮುಲ್ ಇಸ್ಲಾಂಗೆ ವಿಕೆಟ್ ಒಪ್ಪಿಸಿದರು.
ಶ್ರೇಯಸ್ ಅಯ್ಯರ್ ಮತ್ತು ಧವನ್ ಮೂರನೇ ವಿಕೆಟ್‌ಗೆ 34 ರನ್ ದಾಖಲಿಸಿದರು. ಶ್ರೇಯಸ್ ಅಯ್ಯರ್ 13 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿ ಸಹಾಯದಿಂದ 22 ರನ್ ಗಳಿಸಿದರು. 14.5ನೇ ಓವರ್‌ನಲ್ಲಿ ಶಿಖರ್ ಧವನ್ ರನೌಟಾಗುವುದರೊಂದಿಗೆ ತಂಡದ ನಾಲ್ಕನೇ ವಿಕೆಟ್ ಪತನಗೊಂಡಿತು.
ಚೊಚ್ಚಲ ಪಂದ್ಯವನ್ನಾಡಿದ ಶಿವಮ್ ದುಬೆ (1) ವಿಫಲರಾದರು. ವಿಕೆಟ್ ಕೀಪರ್ ರಿಷಭ್ ಪಂತ್ 27 ರನ್ ಗಳಿಸಿ ಔಟಾದರು.
ಕೃನಾಲ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ಮುರಿದ ಜೊತೆಯಾಟದಲ್ಲಿ 28 ರನ್ ಸೇರಿಸಿದರು.
ಪಾಂಡ್ಯ ಔಟಾಗದೆ 15ರನ್(8ಎ, 1ಬೌ,1ಸಿ) ಮತ್ತು ಸುಂದರ್ ಔಟಾಗದೆ 14 ರನ್(5ಎ, 2ಸಿ) ಗಳಿಸಿದರು. ಬಾಂಗ್ಲಾದ ಶಫಿಯುಲ್ ಇಸ್ಲಾಂ 36ಕ್ಕೆ 2 ವಿಕೆಟ್, ಅನಿಮುಲ್ ಇಸ್ಲಾಂ 22ಕ್ಕೆ 2 ಮತ್ತು ನಾಯಕ ಮಹ್ಮುದುಲ್ಲಾ 10ಕ್ಕೆ 1 ವಿಕೆಟ್ ಪಡೆದರು.